ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಶುಕ್ರವಾರ ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿವಿಧ ದೀಪದಾರತಿ ಸೇವೆಯನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಮಾವಾಸ್ಯೆ ಅಂಗವಾಗಿ ದೇಗುಲವನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಬೆಳಗಿನ ಜಾವ 5 ಗಂಟೆ ಸುಮಾರು ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ಪನ್ನೀರು, ಎಳನೀರು, ಅರಿಸಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಪಂಚಾಮೃತ ಅಭಿಷೇಕ ಅರ್ಪಿಸಲಾಯಿತು. ತೆಂಗಿನಕಾಯಿ, ಕೊಬ್ಬರಿ, ನಿಂಬೆ, ಬೆಲ್ಲ ಹಾಗೂ ಪಂಜಿನ ಆರತಿ ಸೇವೆ ನೆರವೇರಿಸಲಾಯಿತು. ಜತೆಗೆ 25 ದೀಪಾದಾರತಿ ಸೇವೆಯು ನಡೆಯಿತು. ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಪಟ್ಟಣ ಸೇರಿದಂತೆ ಭೈರನತ್ತ, ಉದ್ದನೂರು, ಚಿಕ್ಕಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರೆ ಕಡೆಗಳಿಂದ ಆಗಮಿಸಿದ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ಪೂಜಾ ಕೈಂಕರ್ಯವನ್ನು ಜಯಂತ್‌ರಾವ್ ಸಿಂಧೆ ನೆರವೇರಿಸಿದರು.