ಜಿಲ್ಲೆ

ನೇತ್ರದಾನದ ಮೂಲಕ ಬೆಳಕಾಗಿ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಲ್ಲಿ ಬೆಳಕಾಗಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತ ಕರೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಶ್ರಯದಲ್ಲಿ ನಡೆದ 40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಾಸನ ಹಾಗೂ ಎಂಟಿಪಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯರಿಗೆ ಕಣ್ಣು ಪ್ರಮುಖ ಅಂಗ. ಆಗಸ್ಟ್ 25 ರಿಂದ ಸೆಪ್ಟಂಬರ್ 8 ರವರೆಗೆ ರಾಜ್ಯದಾದ್ಯಂತ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ನೇತ್ರದಾನದ ಮಹತ್ವ ತಿಳಿಸಲಾಗುತ್ತದೆ. ನೇತ್ರದಾನ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ದಾನ ಮಾಡಬಹುದು. ಮನುಷ್ಯರು ಮರಣದ ನಂತರ ಮಣ್ಣಲ್ಲಿ ಮಣ್ಣಾಗಿ ಹೋಗುವ ನೇತ್ರಗಳನ್ನು ದಾನ ಮಾಡಿ ಬೇರೆಯವರ ಬಾಳಲ್ಲಿ ಬೆಳಕಾಗಿ ಮರಣದಲ್ಲಿಯೂ ಮತ್ತೆ ಜೀವಿಸಬಹುದಾಗಿದೆ.ನೇತ್ರದಾನ ಮಾಡಿದವರು ಮರಣ ಹೊಂದಿದ ನಂತರ ಅವರ ಕಣ್ಣುಗಳನ್ನು ಪಡೆದು ಸೂಕ್ತ ವ್ಯಕ್ತಿಗಳಿಗೆ ಅಳವಡಿಸಲಾಗುತ್ತದೆ ಎಂದರು.

ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಕ್ಲಬ್‌ನ ಅಧ್ಯಕ್ಷ ಎಸ್.ಎಸ್.ಜಗದೀಶ್, ವಕೀಲೆ ರುಕ್ಮಿಣಿ, ಎಂ.ಜೆ.ದರ್ಶಿನಿ, ಡಾ.ಆಕರ್ಷ, ಡಾ.ಕ್ಷಮ, ಸಾವಿತ್ರಮ್ಮ, ಪಿ.ಪಿ.ಬೇಬಿ, ಶೋಭಾ, ಡೈಸಿ, ಪಿ.ಎಸ್.ವಿದ್ಯಾನಂದಕುಮಾರ್, ಕುಮಾರ.ಜಿ.ಶೆಟ್ಟಿ, ನಾಗೇಶಗೌಡ, ಟಿ.ಎಂ.ಶಿವಕುಮಾರ್ ಇದ್ದರು.