ನಂಜನಗೂಡು: ತಾಲೂಕಿನ ಹೆಡಿಯಾಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ಬುಧವಾರ ದೀಪ ಹಚ್ಚಿ ದೀಪಾವಳಿ ಆಚರಿಸಿ ಪರಿಸರಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಾಲೆಯ ಉಪ ಪ್ರಾಂಶುಪಾಲ ಶಿವಲಿಂಗಪ್ಪ ಪಟಾಕಿಗಳನ್ನು ಹಚ್ಚುವುದರಿಂದ ಶಬ್ದಮಾಲಿನ್ಯ ವಾಯುಮಾಲಿನ್ಯ ನೆಲ ಮತ್ತು ಜಲ ಮಾಲಿನ್ಯ ಉಂಟಾಗಿ ಪರಿಸರಕ್ಕೆ ಹಾನಿ ಉಂಟಾಗುವುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಕೋ ಕ್ಲಬ್ ನೋಡಲ್ ಶಿಕ್ಷಕರಾದ ವೆಂಕಟೇಶ್ ಹಾಗೂ ಶಿವಣ್ಣ ಅವರು ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಪ್ರಾಣಿ ಪಕ್ಷಿ, ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಪಟಾಕಿ ಖರೀದಿಸಲು ಬಳಸುವ ಹಣವನ್ನು ವಿದ್ಯಾಭ್ಯಾಸಕ್ಕೆ ಬಳಸಬೇಕೆಂದು ತಿಳಿಸಿದರು.
’ಹಣತೆ ಹಚ್ಚೋಣ-ಪಟಾಕಿ ತ್ಯಜಿಸೋಣ’, ಹಣತೆ ಹಚ್ಚೋಣ ಬನ್ನಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಬನ್ನಿ’ ಎಂಬ ಧೇಯದೊಂದಿಗೆ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ವೆಂಕಟೇಶ್, ಶಿವಣ್ಣ ಭಾಸ್ಕರ್, ಶೇಷಾದ್ರಿ ಮಹದೇವಸ್ವಾಮಿ, ಪುಟ್ಟರಾಜು ಉಪಸ್ಥಿತರಿದರು.