ಜಿಲ್ಲೆ

ಲಕ್ಷ್ಮೇಶ್ವರ ಭಾಗದಲ್ಲಿ ತಂಪೆರೆದ ಮಳೆ

ವೀರೇಶ ಸೌದ್ರಿ

ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಭಾಗದಲ್ಲಿ ಶುಕ್ರವಾರ ಸಂಜೆ ಸುರಿದ ಮುಂಗಾರು ಪೂರ್ವ ಮಳೆ ಇಳೆಯನ್ನು ತಂಪಾಗಿಸಿತು.

ಶುಕ್ರವಾರ ಸಂತೆ ದಿನವಾದ್ದರಿಂದ ವ್ಯಾಪಾರ-ವಹಿವಾಟು ಅಸ್ತವ್ಯಸ್ತಗೊಂಡಿತು. ವ್ಯಾಪಾರಕ್ಕಾಗಿ ಬಂದಿದ್ದ ಗ್ರಾಮೀಣ ಜನರು ಊರು ಸೇರಲು ಪರದಾಡಿದರು. ತಾಲೂಕಿನ ಶಿಗ್ಲಿ, ಆದ್ರಳ್ಳಿ, ಹುಲ್ಲೂರ, ಬಡ್ನಿ, ಬಟ್ಟೂರ, ದೊಡ್ಡೂರ, ಅಕ್ಕಿಗುಂದ, ಶೆಟ್ಟಿಕೇರಿ, ಸೂರಣಗಿ, ಅಡರಕಟ್ಟಿ, ಕುಂದ್ರಳ್ಳಿ, ಯತ್ನಳ್ಳಿ, ಮಾಡಳ್ಳಿ, ಯಳವತ್ತಿ, ಗೊಜನೂರ ಮತ್ತಿತರೆಡೆ ಮಳೆಯಾಗಿದೆ. ಗಾಳಿ ಮಳೆಗೆ ಕೆಲವೆಡೆ ಮರ, ಕಂಬ ಬಿದ್ದು ಕೆಲ ಹೊತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಪ್ರಸ್ತಕ ಮುಂಗಾರು ಪೂರ್ವ ಮೊದಲ ಮಳೆ ಅಶ್ವಿನಿ ಪ್ರಾರಂಭ(ಕೂಡುವ)ವಾಗುವ ಮೊದಲೇ ಮಳೆಯ ವಾತಾವರಣ ರೈತ ಸಮುದಾಯದಲ್ಲಿ ಕೊಂಚ ಹೊಸ ಭರವಸೆ ಮೂಡಿಸಿದೆ. ಉಳುಮೆ ಮಾಡಲಾಗದೇ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದ ರೈತರಿಗೆ ಈ ಮಳೆ ಉಳುಮೆ ಮಾಡಲು ಅನಕೂಲವಾದಂತಾಗಿದೆ. ಹೊಟ್ಟು-ಮೇವಿನ ಬಣವಿ ಒಟ್ಟುತ್ತಿರುವ, ನೀರಾವರಿ ಶೇಂಗಾ ಒಕ್ಕಲಿ ಮಾಡುತ್ತಿರುವ ರೈತರಿಗೆ ಮತ್ತು ಮಾವು, ವಿಳ್ಯದೆಲೆ ಸೇರಿ ತೋಟಗಾರಿಕೆ ಕೆಲ ಬೆಳೆಗಾರರಿಗೆ ಮಳೆಯಿಂದ ಕೊಂಚ ತೊಂದರೆಯೂ ಆಗಿದೆ.