ಆನೇಕಲ್: ಜಿಗಣಿ ಬಳಿ ಎಳನೀರು ವ್ಯಾಪಾರಿಯ ಮಚ್ಚು ಕಿತ್ತುಕೊಂಡು ಇಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ ವಿದ್ಯುತ್ ಕಂಬವೇರಿ ಹೈಡ್ರಾಮ ಸೃಷ್ಟಿಸಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾರ್ಖಂಡ್ ಮೂಲದ ರಾಜ್ಮುಂಡ(45) ಬಂಧಿತ. ಈತ ಜಿಗಣಿಯ ಒಟಿಸಿ ಸರ್ಕಲ್ ಬಳಿ ಎಳನೀರು ವ್ಯಾಪಾರಿಯ ಬಳಿ ಮಚ್ಚು ತೆಗೆದುಕೊಂಡು ಅಲ್ಲೇ ಇದ್ದ ಬೆಂಗಳೂರು ಮೂಲದ ಶ್ರೀಧರ್, ಒಟಿಸಿ ಕಂಪನಿಯ ಇಂಜಿನಿಯರ್ ಯೂನಸ್ ಆಲಂ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಜನ ಆತನನ್ನು ಹಿಡಿಯಲು ಮುಂದಾದಾಗ ನಿರ್ಮಾಣ ಹಂತದ ಕಟ್ಟಡವೇರಿ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬ ಹತ್ತಲು ಯತ್ನಿಸಿ ಆತಂಕ ಸೃಷ್ಟಿ ಮಾಡಿದ್ದ.
ಕಟ್ಟಡ ಏರಿದ ಬಳಿಕ ವಿದ್ಯುತ್ ಕಂಬ ಹತ್ತಿದ ಆತನನ್ನು ಮನವೊಲಿಸಿ ಕೆಳಗಿಳಿಸಲು ಸಾರ್ವಜನಿಕರು ಮೊದಲು ಮಾಡಿದ ಪ್ರಯತ್ನ ಪ್ರಯೋಜನವಾಗಲಿಲ್ಲ, ಅಲ್ಲದೆ ಜಿಗಣಿ ಪೊಲೀಸರ ಮನವಿಗೂ ಬಗ್ಗದೆ ಸುಮಾರು 2 ಗಂಟೆಗಳ ಕಾಲ ರಾದ್ಧಾಂತ ಮಾಡಿದ್ದಾನೆ, ಕೊನೆಗೆ ಕಟ್ಟಡದ ಮೇಲೆ ಹತ್ತಿ ಸ್ಥಳೀಯರು ವಿದ್ಯುತ್ ಕಂಬದ ಮೇಲೆ ಇದ್ದ ಈತನನ್ನು ಮನವೊಲಿಸಿ ಕೆಳಗೆ ತರುವಲ್ಲಿ ಯಶಸ್ವಿ ಆಗಿದ್ದಾರೆ.
ಯಾವುದೇ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ವಿಜಯವಾಣಿಗೆ ಮಾಹಿತಿ ನೀಡಿದರು. ಗಾಯಗೊಂಡ ಇಬ್ಬರನ್ನೂ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಸ್ಪರ್ಶಿಸಿ ಯುವಕ ಸಾವುನೆಲಮಂಗಲ: ಬ್ಯಾಡರಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ. ಗ್ರಾಮದ ನಿವಾಸಿ ಹನುಮಂತಪ್ಪರಾಯಪ್ಪ ಅವರ ಪುತ್ರ ಜೀವನ್(19) ಮೃತ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಜೀವನ್ ಗುರುವಾರ ಸಂಜೆ 7:30ರ ಸುಮಾರಿನಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ನೀರು ಹಾಕಲು ತೆರಳಿದ್ದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಹನುಮಂತಪ್ಪರಾಯಪ್ಪ ಸ್ಥಳೀಯರ ಸಹಕಾರದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.