ಚಿಕ್ಕಮಗಳೂರು: ಮಳಲೂರು ಗ್ರಾಪಂ ಜನತೆಗೆ ಅನುಕೂಲವಾಗುವ 6 ಕೋಟಿ ರೂ. ವೆಚ್ಚದಲ್ಲಿ 14 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಸೂಕ್ತ ಸಹಕಾರ ದೊರೆತಲ್ಲಿ ಪೂರ್ಣಗೊಳಿಸುವುದಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು. ಮಳಲೂರಿನಲ್ಲಿ ಭಾನುವಾರ ಅಂಬಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಅವರು, ನನೆಗುದಿಗೆ ಬಿದ್ದಿರುವ ಯೋಜನೆ ಕುರಿತು ಪ್ರಸ್ತಾಪಿಸಿ, ಯೋಜನೆ ಅನುಷ್ಠಾನವಾದರೆ ಜನರಿಗೆ ಅನುಕೂಲವಾಗಲಿದೆ ಎಂದರು.
ಬ್ಯಾಂಕ್‍ಗಳಿಂದ ತಾರತಮ್ಯ:
ಅನ್ನದಾತರಿಗೆ ಸಾಲ ಸೌಲಭ್ಯಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆ ದಿಸೆಯಲ್ಲಿ ಸಹಕಾರ ಸಂಘಗಳು ಕೃಷಿ ಚಟುವಟಿಕೆಗೆ ರೈತರಿಗೆ ನೆರವಾಗುತ್ತಿವೆ. ಇತ್ತೀಚೆಗೆ ರೈತರಿಗೆ ಸಾಲ ಸೌಲಭ್ಯ ವಿತರಣೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳು ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಸಹಕಾರ ಕ್ಷೇತ್ರದ ಬಗ್ಗೆ ದೊಡ್ಡ ಅಸಮಾಧಾನವಿದ್ದು ನಬಾರ್ಡ್ ಮೂಲಕ ಸಹಕಾರ ಬ್ಯಾಂಕುಗಳಿಂದ ಪತ್ತಿನ ಸಹಕಾರ ಸಂಘಗಳಿಗೆ ಸಾಲ ನೀಡುವ ಬದಲು ಸರ್ಕಾರವೇ ರೈತರಿಗೆ ನೇರವಾಗಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರ ಹೊಸ ಕೃಷಿ ನೀತಿಗಳನ್ನು ಜಾರಿಗೊಳಿಸಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಬೇಕು. ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ 10 ಲಕ್ಷ ರೂ.ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಸಾಲ ನೀಡುವಲ್ಲಿ ಮಲೆನಾಡು ಮತ್ತು ಬಯಲುಸೀಮೆ ಭಾಗದ ಬೆಳೆಗಾರರಿಗೆ ಒಂದೇ ಮಾನದಂಡ ಅನುಸರಿಸುವುದು ಸರಿಯಲ್ಲ ಎಂದು ಹೇಳಿದರು.
ಬಡ್ಡಿರಹಿತ ಸಾಲ ಹೆಚ್ಚಿಸಿ:
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮಳೆಯ ವೈಪರೀತ್ಯದಿಂದ ರೈತರು ಪದೇಪದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ಈ ಹಿಂದೆ ಮೂರು ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತಿತ್ತು. ಅದನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಕಾಳುಮೆಣಸು ಬೆಳೆಗೂ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ರೈತರಿಗೆ ಬೇಡವಾದ ಕೃಷಿ ಕಾಯ್ದೆಗಳು ಸರ್ಕಾರಕ್ಕೆ ಯಾಕೆ ಬೇಕು? ಯಾವುದೇ ಸರ್ಕಾರ ರೈತರ ಪರವಾಗಿ ನಿಲ್ಲದಿದ್ದರೆ ರೈತರ ಕಣ್ಣೀರು ಶಾಪವಾಗಿ ಪರಿಣಮಿಸಲಿದೆ. ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.
ಅಂಬಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಜಗನ್ನಾಥ್ ಮಾತನಾಡಿ, 1976 ರಿಂದ ಸಂಘ 3,890 ಸದಸ್ಯರನ್ನು ಒಳಗೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ತಾಪಂ ಸದಸ್ಯರಾದ ಕೆ.ವಿ.ಮಹೇಶ್, ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ನಿರಂಜನ್, ಸತೀಶ್, ಪರಮೇಶ್, ರೈತ ಮುಖಂಡ ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ರುದ್ರೇಗೌಡ, ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಮಳಲೂರು ಗ್ರಾಪಂ ಅಧ್ಯಕ್ಷ ನವೀನ್‍ಕುಮಾರ್, ಉಪಾಧ್ಯಕ್ಷ ಚಂದ್ರೇಗೌಡ, ಪುಟ್ಟೇಗೌಡ, ಗಂಗೇಗೌಡ, ಯೋಗೀಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಯೋಗೀಶ್, ಬ್ಯಾಂಕ್ ಸಿಇಒ ರವಿಕುಮಾರ್, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣ ಶಿರಗಾಪುರ, ಆಲ್ದೂರು ಬಿಜೆಪಿ ಮಂಡಲ ಅಧ್ಯಕ್ಷ ಮುಗುಳವಳ್ಳಿ ದಿನೇಶ್‍ಕುಮಾರ್, ಸಂಘದ ನಿರ್ದೇಶಕರು ಇದ್ದರು.