ಜಿಲ್ಲೆ

ಶ್ರಮದಿಂದ ಸುಂದರವಾಗಲಿ ಬದುಕು

ಸೋಮನಾಥ ರೆಡ್ಡಿ

ಮುಂಡರಗಿ: ಶಾಮಿಯಾನ ಸಪ್ಲಾಯರ್ಸ್‌ನವರು ತಮ್ಮ ಕಾಯಕದ ಮೂಲಕ ಕಾರ್ಯಕ್ರಮಗಳ ವೈಭವ ಹೆಚ್ವಿಸುವ ಕೆಲಸ ಮಾಡುತ್ತಾರೆ. ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ವೃತ್ತಿಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ತಾಲೂಕು ಶಾಮಿಯಾನ ಸಪ್ಲಾಯರ್ಸ್‌ ಸಂಘದ 5ನೇ ವಾರ್ಷಿಕೋತ್ಸವ ನಿಮಿತ್ತ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮೃಡಗಿರಿ ವೈಭವ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

‘ಶಾಮಿಯಾನ ಸಂಘದವರು ತಮ್ಮ ಉದ್ಯೋಗದ ಮೂಲಕ ನಾಲ್ಕಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಶ್ರಮದಿಂದ ಬದುಕನ್ನು ಸುಂದರವಾಗಿಸಿಕೊಳ್ಳಬೇಕು’ ಎಂದರು.

ಬೆಳಗಟ್ಟಿಯ ಹಜರತ್ ಸೈಯದ್‌ಶಾ ಮಹೆಬೂಬಶಾ ಖಾದ್ರಿಯವರು ಮಾತನಾಡಿ, ಶಾಮಿಯಾನ್ ಸಪ್ಲಾಯರ್ಸ್‌ಗಳು ಗಾಳಿ, ಮಳೆ ಎನ್ನದೆ ಶ್ರಮದಿಂದ ಕಾಯಕ ಮಾಡುವ ಶ್ರಮಜೀವಿಗಳು. ಮನುಷ್ಯ ಪರಸ್ಪರ ಸಹಾಯ, ಸಹಕಾರ, ಪ್ರೀತಿ, ವಿಶ್ವಾಸದಿಂದ ಜೀವನ ನಡೆಸಬೇಕು ಎಂದರು.
ಉತ್ತರ ಕರ್ನಾಟಕ ಶಾಮಿಯಾನ್ ಸಪ್ಲಾಯರ್ಸ್‌ ಸಂಘದ ಅಧ್ಯಕ್ಷ ಅಮರೇಶ್ವರ ಹಿರೇಮಠ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತರಾಗಬೇಕಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗಣೇಶ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಮಹಮ್ಮದಗೌಸ್ ತಾಂಬೋಟಿ, ಚನ್ನಬಸವ ಗಸ್ತಿ, ಮೋಹನ ಗಜಕೋಶ, ಬಿ.ಎಂ. ಸೋಮಶೇಖರ, ಸುಭಾಸ್‌ಸಿಂಗ್ ದೊಡ್ಡಮನಿ, ಶಬ್ಬೀರ ಇಟಿ, ರವೀಂದ್ರಬಾಬು ಮೆಣಸಿನಕಾಯಿ, ರಾಜೇಸಾಬ ಲಕ್ಷ್ಮೇಶ್ವರ, ಈರಣ್ಣ ತಾಳಿಕೋಟಿ, ಉಮರ್ ಕಾಳೆ, ಮುರ್ತುಜ್‌ಖಾನ್ ತಂಬ್ರಳ್ಳಿ, ಕುಮಾರಸ್ವಾಮಿ ಹಿರೇಮಠ, ವಿಜಯ ಮುದ್ದಿ, ಇತರರಿದ್ದರು. ಶರಣಪ್ಪ ಕುಬಸದ ಪ್ರಾರ್ಥಿಸಿದರು. ಮುತ್ತಣ್ಣ ಸವದಿ ಸ್ವಾಗತಿಸಿದರು. ರಾಜಶೇಖರ ಹುಲ್ಯಾಳ, ಮಂಜುನಾಥ ಹೊಸಮನಿ ನಿರೂಪಿಸಿದರು.