ಮಂಡ್ಯ: ಜೀವ ವೈವಿಧ್ಯ ಇರುವುದರಿಂದಲೇ ಜಗತ್ತಿನಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೃಷಿಕ್ ಲಯನ್ಸ್ ಸಂಸ್ಥೆ ಪೋಷಕ ಕೆ.ಟಿ.ಹನುಮಂತು ಹೇಳಿದರು.
ವಿಶ್ವ ಜೀವ ವೈವಿಧ್ಯ ದಿನಾಚರಣೆ ಅಂಗವಾಗಿ ಕೃಷಿಕ್ ಲಯನ್ಸ್ ಸಂಸ್ಥೆಯಿಂದ ಶನಿವಾರ ನಗರದ ಮರೀಗೌಡ ಬಡಾವಣೆಯ ಗಣೇಶ ದೇವಸ್ಥಾನದ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದರು.
ಕ್ರಿ.ಶ. 1600ರಿಂದ 1900ರವರೆಗೆ ಮನುಷ್ಯ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಜೀವ ಸಂಕುಲವನ್ನು ನಾಶಪಡಿಸಿದ್ದರೆ, 1900ರಿಂದೀಚೆಗೆ ಪ್ರತಿ ವರ್ಷವೂ ಮನುಷ್ಯನ ದೌರ್ಜನ್ಯಕ್ಕೆ ಸಿಲುಕಿ ಒಂದೊಂದು ಜೀವ ಸಂಕುಲ ನಶಿಸಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತಮ ಭವಿಷ್ಯಕ್ಕಾಗಿ ನೆಲ, ಜಲ, ಅರಣ್ಯ, ವನ್ಯಜೀವಿಗಳನ್ನು ಸಂರಕ್ಷಿಸಬೇಕಿದೆ. ಆದ್ದರಿಂದ ನಮ್ಮ ಸುತ್ತಲಿನ ಪರಿಸರದಲ್ಲಿ ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸುವ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕಾಗಿದೆ. ಮನುಷ್ಯನ ಜೀವನದ ಎಲ್ಲ ಕ್ಷೇತ್ರಗಳೂ ಜೀವ ವೈವಿಧ್ಯದಿಂದ ಪ್ರತ್ಯಕ್ಷ, ಪರೋಕ್ಷವಾಗಿ ಪೋಷಿಸಲ್ಪಟ್ಟಿರುತ್ತದೆ ಎಂದರು.
ಕೃಷಿಕ್ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಮೋಹನ್‌ಕುಮಾರ್, ಮುಖಂಡರಾದ ಪುಟ್ಟಸ್ವಾಮಿ, ಶಂಕರ್, ಪಾಪಣ್ಣ, ನಾಗು, ರಕ್ಷಿತ್ ಇತರರಿದ್ದರು.