ಹೂವಿನಹಡಗಲಿ: ಪಾಠ, ಪ್ರವಚನದ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾಗಬೇಕು ಎಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯರು ಹೇಳಿದರು.
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪದವಿ ಕಾಲೇಜಿನಿಂದ ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ಆಯೋಜಿಸಿರುವ ಆರು ದಿನಗಳ ಎನ್ನೆಸ್ಸೆಸ್ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ನಮ್ಮ ಮನೆಯಲ್ಲಿ ಒಂದು ಸಣ್ಣ ಕೆಲಸ ಮಾಡದ ನಾವು ಎನ್ನೆಸ್ಸೆಸ್ ಶಿಬಿರದಲ್ಲಿ ಅಪರಿಚಿತರ ಮನೆ ಮುಂಭಾಗವನ್ನು ಸ್ವಚ್ಛಗೊಳಿಸುತ್ತೇವೆ. ಶಿಕ್ಷಣ ಕೇವಲ ಅಕ್ಷರ ಕಲಿಸುವಂತದ್ದಲ್ಲ. ಜೀವನದ ಮೌಲ್ಯಗಳನ್ನು ತಿಳಿಸುವುದಾಗಿದೆ. ಶಿಬಿರದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಪದವಿ ಹಂತದಲ್ಲಿನ ಶಿಕ್ಷಣ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಪ್ರಾಚಾರ್ಯ ಎಂ.ವಿಜಯಕುಮಾರ, ಎನ್ನೆಸ್ಸೆಸ್ ಘಟಕಾಧಿಕಾರಿಗಳಾದ ಜಿ.ಟಿ.ಉಮಾದೇವಿ, ಡಾ.ಭೀಮಪ್ಪ ಎಂ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶಾಂತರಾಜ, ಎಚ್.ಡಿ.ಜಗ್ಗಿನ್, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ್ ಇತರರಿದ್ದರು.