ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಸುಮಂತ್, ರಾಕೇಶ್, ಕೆ.ಎನ್.ರಮೇಶ್, ಸುಧೀರ್‌ಕುಮಾರ್, ಮಂಜುಳಾ ಇತರರಿದ್ದರು.  
ಜಿಲ್ಲೆ

ವಿಶ್ವಕರ್ಮರ ಕೈಸ್ಪರ್ಶದಿಂದ ಶಿಲೆಗೆ ಜೀವ

ಚಿಕ್ಕಮಗಳೂರು: ಬಂಡೆ, ಮರದ ದಿಮ್ಮಿಗಳನ್ನು ಕೆತ್ತಿ ಜೀವ ತುಂಬಿ ಆರಾಧಿಸುವಂತೆ ಮಾಡುವ ಶಕ್ತಿ ವಿಶ್ವಕರ್ಮ ಸಮಾಜದವರಿಗೆ ಇದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿ, ಯಾವುದೇ ಪ್ರಸಿದ್ಧ ದೇವಾಲಯಗಳಿಗೆ ಹೋದಾಗ ಅಲ್ಲಿನ ಶಿಲ್ಪಕಲೆ, ರಥಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಅದರಲ್ಲೂ ಬೇಲೂರು, ಹಳೇಬೀಡು ದೇವಾಲಯಗಳ ಶಿಲ್ಪಕಲೆಯನ್ನು ನೋಡಿ ಶ್ಲಾಘಿಸುವುದು ಜಕಣಾಚಾರಿ ಅವರನ್ನು. ಇಂಥ ಮಹಾನ್ ಶಿಲ್ಪಿಗಳು ವಿಶ್ವಕರ್ಮ ಸಮಾಜದವರು. ವಿಶ್ವಕರ್ಮ ಸಮಾಜದವರು ಶಿಲ್ಪಿಗಳನ್ನು, ಸಮಾಜದ ಕಸುಬನ್ನು ಹೆಮ್ಮೆಯಿಂದ ಶ್ಲಾಘಿಸಿಕೊಳ್ಳಬೇಕು ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಬ್ರಹ್ಮ ಜಗತ್ತಿನ ಸೃಷ್ಟಿಕರ್ತನಾಗಿದ್ದರೂ ಆತ ಮೊದಲು ಸೃಷ್ಟಿ ಮಾಡಿದ್ದು ವಿಶ್ವಕರ್ಮರನ್ನು. ವಿಶ್ವಕರ್ಮ ಸಮುದಾಯದವರು ದೈವಾಂಶ ಸಂಭೂತರಾಗಿದ್ದಾರೆ ಎಂದು ಹೇಳಿದರು.
ದೇವೇಂದ್ರನ ಇಂದ್ರಪ್ರಸ್ತ ಹಾಗೂ ಇಂದ್ರನ ಇಂದ್ರಾಯುಧ ನಿರ್ಮಾಣ ಮಾಡಿಕೊಟ್ಟವರು ವಿಶ್ವಕರ್ಮರು ಎಂಬುದು ಇನ್ನೊಂದು ವಿಶೇಷ. ತ್ರೇತಾಯುಗದಲ್ಲಿ ಶ್ರೀರಾಮ ಸೀತೆಯನ್ನು ಹುಡುಕಿ ಲಂಕೆಗೆ ಹೊರಟಾಗ ಎಷ್ಟೇ ಪ್ರಯತ್ನಪಟ್ಟರೂ ಸಮುದ್ರಕ್ಕೆ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ ವಿಶ್ವಕರ್ಮರನ್ನು ಉಪಾಸನೆ ಮಾಡಿದ ಬಳಿಕವೇ ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂಬುದನ್ನು ಗ್ರಂಥಗಳಲ್ಲಿ ತಿಳಿಯಬಹುದು ಎಂದು ಹೇಳಿದರು.
ವಿಶ್ವಕರ್ಮರ ಆಲೋಚನಾ ಶಕ್ತಿಯೇ ವಿಶಿಷ್ಟ. ಪೌರಾಣಿಕ ಪರಂಪರೆಯಿರುವ ಜಗನ್ನಾಥಪುರಿ ದೇವಾಲಯ ನಿರ್ಮಾಣ ಮಾಡಿದವರು ವಿಶ್ವಕರ್ಮರು. ಪುಷ್ಪಕ ವಿಮಾನ ನಿರ್ಮಾತೃಗಳು ವಿಶ್ವಕರ್ಮರು ಎಂಬುದು ಹಲವು ಜನರಿಗೆ ತಿಳಿದಿಲ್ಲ. ಅಂದೇ ವಿಶ್ವಕರ್ಮರಿಗೆ ವಿಮಾನಗಳ ಕಲ್ಪನೆ ಬಂದಿದ್ದನ್ನು ನಾವು ಪೌರಾಣಿಕ ಸಾಹಿತ್ಯದಲ್ಲಿ ಕಾಣಲು ಸಾಧ್ಯ ಎಂದರು.
ತಹಸೀಲ್ದಾರ್ ಸುಮಂತ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಪ್ರಮುಖರಾದ ಕೆ.ಎನ್.ರಮೇಶ್, ಉಮಾಶಂಕರ್, ಬಿ.ಜೆ.ಚೇತನ್‌ಕುಮಾರ್, ಸುಧೀರ್‌ಕುಮಾರ್, ಮಂಜುಳಾ, ಗೋಪಾಲ್ ಆಚಾರ್ ಇತರರಿದ್ದರು.