ಜಿಲ್ಲೆ

ಶ್ರೀರಾಮ ಸೇನೆ ಮುಖಂಡನಿಗೆ ಜೀವ ಬೆದರಿಕೆ

ಭದ್ರತೆಗಾಗಿ ರಾಜ್ಯ ವಕ್ತಾರ ಎಸ್.ಭಾಸ್ಕರನ್ ಆಗ್ರಹ

ರಾಮನಗರ : ಶ್ರೀರಾಮ ಸೇನೆ ಕಗ್ಗಲಿಪುರ ಘಟಕದ ಅಧ್ಯಕ್ಷ ಉಮೇಶ್ ಅವರಿಗೆ ಜೀವ ಬೆದರಿಕೆಯಿದ್ದು, ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ವಕ್ತಾರ ಎಸ್.ಭಾಸ್ಕರನ್ ಆಗ್ರಹಿಸಿದರು.

ರಾಮನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಗ್ಗಲಿಪುರ ಗ್ರಾಮ ಪಂಚಾಯಿತಿ ಸದಸ್ಯನಿಂದ ಜೀವ ಬೆದರಿಕೆ ಇದೆ. ಹಾಗಾಗಿ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಬೇಕು ಎಂದರು.

ಭದ್ರತೆ ನೀಡುವ ವಿಚಾರವಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಿಸಿರುವುದಲ್ಲದೆ, ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ. ಜತೆಗೆ ಕಗ್ಗಲಿಪುರ ಠಾಣೆಯಲ್ಲಿ ಈ ಸಂಬಂಧ ದೂರು ನೀಡುತ್ತೇವೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಈ ಹಿಂದೆ ಕಗ್ಗಲಿಪುರ ಗ್ರಾಪಂ ಅಧ್ಯಕ್ಷನಾಗಿದ್ದ. ಇವನ ಕಾಲವಾಧಿಯಲ್ಲಿ ನಡೆದ ಅಕ್ರಮಗಳ ವಿರುದ್ಧ ಉಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಜತೆಗೆ, ಇದೇ ಗ್ರಾಪಂ ಸದಸ್ಯ ಮತ್ತು ಅವರ ತಂದೆ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದ್ದು, ಉಮೇಶ್ ವಕೀಲರಾಗಿರುವ ಕಾರಣ ಸಂತ್ರಸ್ತೆಯ ಪರವಾಗಿ ಸರ್ಕಾರಿ ಅಭಿಯೋಜಕರಿಗೆ ಮಾಹಿತಿ ನೀಡುವ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆ ನೀಡುವ ಕೆಲಸ ಮಾಡುತ್ತಿದ್ದಾರೆ. ಉಮೇಶ್ ಅವರ ಈ ಕಾರ್ಯ ಸಹಿಸದೆ ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ತಿಳಿಸಿದರು.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ನಾಗಾರ್ಜುನ್ ಗೌಡ ಮಾತನಾಡಿ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಹಲ್ಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್, ಮುಖಂಡರಾದ ಕೃಷ್ಣಮೂರ್ತಿ, ಉಮೇಶ್, ವಕೀಲ ಉಮೇಶ್ ಇದ್ದರು.