ಉಡುಪಿ: ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಕ್ಷುಲ್ಲಕ ಕಾರಣಕ್ಕೆ ಮದ್ಯ ಕುಡಿಸಿ ಸ್ನೇಹಿತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳು ಎಂದು ತೀರ್ಪು ನೀಡಿರುವ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪೆರ್ಣಂಕಿಲ ನಿವಾಸಿ ರಾಜೇಂದ್ರ ನಾಯ್ಕ(49) ಹಾಗೂ ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ನಿವಾಸಿ ಸಂತೋಷ್ ಪೂಜಾರಿ (41) ಪ್ರಕರಣದ ದೋಷಿಗಳು. ಆಂಡ್ರ್ಯೂ ಮಾರ್ಟಿಸ್ ಯಾನೆ ಅಣ್ಣು ಪೊರ್ಬುಲು ಕೊಲೆಯಾದ ವ್ಯಕ್ತಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಆಂಡ್ರ್ಯೂ ರಾಜೇಂದ್ರ ಹಾಗೂ ಸಂತೋಷ್ ಮನೆಯವರಿಗೆ ಯಾವಾಗಲೂ ಅವಾಚ್ಯವಾಗಿ ಬೈಯುತ್ತಿದ್ದ ಕಾರಣ 2019 ರ ಜ.25ರಂದು ಬೆಳಗ್ಗೆ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ತಾಕಡಬೈಲಿನ ಹಾಡಿಯಲ್ಲಿ ನೈಲಾನ್ ಹಗ್ಗದಿಂದ ಉಸಿರುಕಟ್ಟಿಸಿ ಕೊಲೆ ಮಾಡಲಾಗಿತ್ತು. ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಆರೋಪ ಪಟ್ಟಿ ದಾಖಲಿಸಿದ್ದು, ಆರೋಪಿಗಳು ಕೊಲೆ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಜಿ.ಎನ್. ಸುಬ್ರಹ್ಮಣ್ಯ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದರು.