ಜಿಲ್ಲೆ

ಹೆಂಡತಿ ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ: ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟ

ಕೆ.ಎನ್.ರಾಘವೇಂದ್ರ

ಮಂಡ್ಯ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಗಂಡನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 40 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಮಳವಳ್ಳಿ ತಾಲೂಕು ಕಲ್ಕುಣಿ ಗ್ರಾಮದ ಕುಮಾರಸ್ವಾಮಿ ಅಲಿಯಾಸ್ ಕುಮಾರ ಶಿಕ್ಷೆಗೊಳಗಾದ ವ್ಯಕ್ತಿ. 2009ರ ಮೇ.3ರಂದು ಕುಮಾರಸ್ವಾಮಿ, ಕಿರುಗಾವಲು ಗ್ರಾಮದ ರಾಜಣ್ಣ ಎಂಬುವರ ಪುತ್ರಿ ಸೌಮ್ಯ ಅವರನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಪ್ರಾರಂಭದಲ್ಲಿ ದಂಪತಿ ಚೆನ್ನಾಗಿದ್ದರು. ಆದರೆ ನಂತರದ ದಿನಗಳಲ್ಲಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಇದರಿಂದ ಬೇಸತ್ತ ಪತ್ನಿ ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದಿದ್ದರು.

ಬಳಿಕ ಕಿರುಗಾವಲಿನಿಂದ ಮಳವಳ್ಳಿಯ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. 2019ರ ಜೂ.23ರಂದು ಕುಮಾರಸ್ವಾಮಿ ಪತ್ನಿಯ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ 7 ಗಂಟೆ ವೇಳೆ ಪತ್ನಿಯೊಂದಿಗೆ ಜಗಳ ತೆಗೆದು ಹಣ ನೀಡುವಂತೆ ಒತ್ತಾಯಿಸಿ ಗಲಾಟೆ ನಡೆದಿತ್ತು. ಈ ವೇಳೆ ಆಕ್ಸಲ್ ಬ್ಲೇಡ್‌ನಿಂದ ಸೌಮ್ಯಳ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ನಡೆದು ಸಾಕ್ಷಾೃಧಾರ ಸಂಗ್ರಹಿಸಿ ಮಳವಳ್ಳಿ ಸಿಪಿಐ ಧರ್ಮೇಂದ್ರ ಅವರು ಕುಮಾರಸ್ವಾಮಿ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವನ್ನು ಮಂಡ್ಯದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ನಿರ್ಮಲಾ ಅವರು ವಿಚಾರಣೆ ನಡೆದು ಆರೋಪಿಗೆ ಐಪಿಸಿ ಕಲಂ 302ರ ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ 40 ಸಾವಿರ ರೂ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್.ಶಣೈ ವಾದ ಮಂಡಿಸಿದ್ದರು.