ಜಿಲ್ಲೆ

ಮಗು ಕೊಂದವನಿಗೆ ಜೀವಾವಧಿ ಶಿಕ್ಷೆ

ಆರ್.ಕೃಷ್ಣ

ಮೈಸೂರು: ಕುಡಿಯಲು ಹಣ ನೀಡಲಿಲ್ಲ ಎಂದು ತಂಗಿಯ ಏಳು ತಿಂಗಳ ಹೆಣ್ಣು ಮಗುವನ್ನು ಹೊಡೆದು ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಮೈಸೂರಿನ ಕನಕಗಿರಿಯ ಕೆ.ರಾಜು ಶಿಕ್ಷೆಗೆ ಗುರಿಯಾದ ಅಪರಾಧಿ. ಕನಕಗಿರಿಯ ಸಿದ್ದಮ್ಮ ಅವರಿಗೆ ಮಗ ಸಿದ್ದರಾಜು, ಮಗಳು ರಮ್ಯಾ ಇದ್ದರು. ರಮ್ಯಾಳನ್ನು 2020ರ ಮಾರ್ಚ್ 15ರಂದು ನಾಗೇಂದ್ರ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. 2021ರಲ್ಲಿ ರಮ್ಯಾಳಿಗೆ ಮಗು ಆಗಿದ್ದರಿಂದ ತಾಯಿ ಮನೆಗೆ ಬಾಣಂತನಕ್ಕಾಗಿ ಬಂದಿದ್ದಳು.

ಕುಡಿತದ ಚಟಕ್ಕೆ ಬಲಿಯಾಗಿದ್ದ ಕೆ.ರಾಜು ಹಣ ಕೊಡುವಂತೆ ತಾಯಿ ಸಿದ್ದಮ್ಮ, ತಂಗಿ ರಮ್ಯಾಳನ್ನು ಪೀಡಿಸಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ತರಕಾರಿ ವ್ಯಾಪಾರಕ್ಕೂ ಹೋಗದೆ ದಿನದಿಂದ ದಿನಕ್ಕೆ ಚಟ ಹೆಚ್ಚಾದ ಈತ 2022ರ ಏಪ್ರಿಲ್ 24ರಂದು ಬೆಳಗ್ಗೆ 11.30ರ ಸಮಯದಲ್ಲಿ ಹಣ ಕೊಡದಿದ್ದಾಗ ರಮ್ಯಾಳ ಜೊತೆಗೆ ಜಗಳ ತೆಗೆದು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ನೋವು ತಾಳಲಾರದೆ ರಮ್ಯಾ ಸಹಾಯಕ್ಕೆ ಕೂಗಿಕೊಂಡು ಮನೆಯಿಂದ ಹೊರ ಓಡಿ ಬಂದಾಗ ರಾಜ, ಜೋಗುಳದಲ್ಲಿ ಇದ್ದ 7 ತಿಂಗಳ ಹೆಣ್ಣು ಮಗುವನ್ನು ಎತ್ತಿಕೊಂಡು ತಕ್ಕಡಿ ತೂಗುವ ಕಬ್ಬಿಣದ ಬಟ್‌ನಿಂದ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಮಗು ಮೃತಪಟ್ಟಿದ್ದು, ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ತನಿಖೆ ನಡೆಸಿದ ಅಂದಿನ ಇನ್ಸ್‌ಪೆಕ್ಟರ್ ಜಿ.ಸಿ.ರಾಜು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಗರದ 6ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿ.ಎಚ್.ದಯಾನಂದ ಅವರು, ಸಾಕ್ಷಾೃಧಾರಗಳನ್ನು ಪರಿಶೀಲಿಸಿ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎಂ. ಕಾಮಾಕ್ಷಿ ವಾದ ಮಂಡಿಸಿದ್ದರು.