ಜಿಲ್ಲೆ

ಚಿಂತೆ ಚಿಂತನಗೊಂಡಾಗ ಬದುಕು ಸಾರ್ಥಕ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗುರಿಗಳಿಲ್ಲದ ಜೀವನ ಮತ್ತು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನ ಪಡೆಯುತ್ತಿಲ್ಲ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ರಂಭಾಪುರಿ ಪೀಠದಲ್ಲಿ ಆರಂಭಗೊಂಡ 34ನೇ ವರ್ಷದ ಶ್ರಾವಣ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಭಾರತೀಯ ಪುಣ್ಯ ಭೂಮಿಯಲ್ಲಿ ಬಹಳಷ್ಟು ಆಚರಣೆಗಳು ಬೆಳೆದು ಬಂದಿವೆ. ಹಿಂದುಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ. ವಿಚಾರ ವಿಮರ್ಶೆಗಳು ಸಂಸ್ಕೃತಿ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಬುದ್ಧಿ ವಿಕಾಸಗೊಂಡಂತೆ ಭಾವನೆಗಳು ಬೆಳೆದು ಬರುವ ಅವಶ್ಯಕತೆಯಿದೆ.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಎಸ್.ಹೆಚ್.ಸಿದ್ಧಣ್ಣ, ನಾಗರನವಿಲೆಯ ಪವನಕುಮಾರ್, ಸಿದ್ದೇಶ್ವರ ಶಾಸ್ತ್ರಿಗಳು, ಶಂಕರನಹಳ್ಳಿ ಸದ್ಭಕ್ತರು ಉಪಸ್ಥಿತರಿದ್ದರು. ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ಮಾಡಿ, ಗಂಗಾಧರ ಹಿರೇಮಠ ಪ್ರಾರ್ಥಿಸಿದರು. ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗಯ್ಯ ಶಾಸ್ತ್ರಿ ಸ್ವಾಗತಿಸಿ, ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.