ರೋಣ: ತಾಯಿ ಸೇವೆ ಮಾಡಿದರೆ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ. ತಾಯಿಯ ಮನಸು ನೋಯಿಸಿದವರಿಗೆ ಪಾಪ ಕಾಡುತ್ತದೆ ಎಂದು ಕುದುರಿಮೋತಿ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಎಸ್.ಆರ್. ಪಾಟೀಲ ಪ್ರತಿಷ್ಠಾನ, ಮಾತೋಶ್ರೀ ಬಸಮ್ಮ.ಎಸ್.ಪಾಟೀಲ ಪುಣ್ಯಸ್ಮರಣೋತ್ಸವ ಸಮಿತಿ ವತಿಯಿಂದ ಮಾತೋಶ್ರೀ ಬಸಮ್ಮ ಎಸ್.ಪಾಟೀಲ ಅವರ 19ನೇ ಪುಣ್ಯಾರಾಧನೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕಿಡ್‌ಜೀ ಪೂರ್ವ ಪ್ರಾಥಮಿಕ ಶಾಲೆ, ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಧರ್ಮ ಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ತಾಯಿಯನ್ನು ಯಾರು ಗೌರವಿಸಿ, ಪೂಜಿಸುತ್ತಾರೋ ಅಂಥವರ ಜೀವನ ಸಾರ್ಥಕವಾಗುವುದರ ಜತೆಗೆ ಮೋಕ್ಷ ಲಭಿಸುತ್ತದೆ. ತಾಯಿಗೆ ನೋವಾಗುವಂತೆ ನಡೆದುಕೊಳ್ಳುವುದು ಮಾನವೀಯತೆಯಲ್ಲ. ತಾಯಿಯೇ ಜಗತ್ತಿನಲ್ಲಿ ಶ್ರೇಷ್ಠಳಾಗಿದ್ದಾಳೆ ಎಂದರು.
ಹಾಲಕೇರಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಸೋಲು, ಗೆಲುವಿನಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು. ಸದಾ ಸಮಾಜಮುಖಿ ಸ್ವಭಾವವನ್ನು ರೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ ಮಾತನಾಡಿ, ಕುಟುಂಬ ಮತ್ತು ಸಮಾಜದ ಪ್ರಗತಿಗೆ ಶಿಕ್ಷಣ ಅತೀ ಮುಖ್ಯವಾಗಿದೆ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಅವರೇ ಬಹು ದೊಡ್ದ ಆಸ್ತಿಯಾಗುತ್ತಾರೆ. ಸುಭದ್ರ ದೇಶಕ್ಕೆ ಉತ್ತಮ ನಾಗರಿಕರಾಗುತ್ತಾರೆ ಎಂದರು.
ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶಿರ್ವಚನ ನೀಡಿದರು. ಮಾತೋಶ್ರೀ ಬಸಮ್ಮ ಎಸ್.ಪಾಟೀಲ ಅವರ ಕುರಿತಾದ ನೂರೆಂಟು ನೆನಪು ಗ್ರಂಥ ಬಿಡುಗಡೆ ಮಾಡಲಾಯಿತು. ವರ್ಷಾ ಜಿ. ಪಾಟೀಲ ಹಾಗೂ ಮಹಿಳಾ ಸೆಸ್ಡೊಬಾಲ್ ಕ್ರೀಡಾ ತಂಡದ ನಾಯಕಿ ಪುಣ್ಯಶ್ರೀ ಎನ್.ಎಸ್, ಪುಟಾಣಿ ಗಾಯಕಿ ಮಹನ್ಯಾ ಪಾಟೀಲ ಇತರರನ್ನು ಸನ್ಮಾನಿಸಲಾಯಿತು.
ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಕೊತಬಾಳ ಗಂಗಾಧರ ಸ್ವಾಮೀಜಿ, ನಿಡಗುಂದಿ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಆರ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್.ಯಾವಗಲ್ಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ವಾಸಣ್ಣ ಕುರಡಗಿ, ಪ್ರಭು ಮೇಟಿ, ಹುಮಾಯೂನ ಮಾಗಡಿ, ವೀರಣ್ಣ ಶೆಟ್ಟರ, ಡಾ. ಕೆ.ಬಿ. ಧನ್ನೂರ ಇತರರಿದ್ದರು. ಐ.ಎಸ್. ಪಾಟೀಲ ಸ್ವಾಗತಿಸಿದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ವೀರಭದ್ರಗೌಡ ಪಾಟೀಲ ವಂದಿಸಿದರು.