ಗೋಕರ್ಣ: ಲಕ್ಷ್ಮೀ ಎಂದರೆ ಧನ, ಸಂಪತ್ತು. ನಾರಾಯಣ ಎಂದರೆ ಧರ್ಮ. ಲಕ್ಷ್ಮೀ ಸಂಗಡ ನಾರಾಯಣ ಇದ್ದರೆ ಹೇಗೆ ಶೋಭಾಯಮಾನವೋ ಹಾಗೆ ಧನದ ಜತೆಗೆ ಧರ್ಮ ಇದ್ದರೆ ಮಾತ್ರ ಬದುಕು ಶ್ರೇಯಸ್ಕರ ಎಂದು ಸಂಘಟನಾ ಚಾತುರ್ವಸ್ಯ ದೀಕ್ಷಾ ಬದ್ಧರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಉಡುಪಿ ಮತ್ತು ಮಂಗಳೂರು ವಲಯಗಳ ಭಿಕ್ಷಾಸೇವೆಯಲ್ಲಿ ಆಶೀರ್ವಚನ ಅನುಗ್ರಹಿಸಿದರು.
ಧರ್ಮ ಇಲ್ಲದ ಧನ ನಿರರ್ಥಕವಾದುದು. ಸಮಾಜದಲ್ಲಿ ಜನತೆ ಧನವಂತರಾದರೆ ಸಾಲದು. ಧರ್ಮವಂತರೂ ಆಗಬೇಕು. ಹೀಗಾಗಿ ನಮ್ಮ ಸನಾತನ ಸಂಸ್ಕೃತಿಯನ್ನು ಸಂರಕ್ಷಿಸಬೇಕು. ನಮ್ಮದು ಸತ್ಯದ ಪರಂಪರೆ. ಎಂತಹದ್ದೇ ವಿಪತ್ತು, ಸಂಕಷ್ಟ ಎದುರಾದರೂ ಒಪ್ಪಿತ ಕಾರ್ಯವನ್ನು ಮಾಡಿ ಮುಗಿಸಬೇಕು ಎಂದರು.
ಮಗುವಿಗೆ ಬಾಲ್ಯದಲ್ಲಿಯೇ ಸಂಸ್ಕಾರವಂತ ಶಿಕ್ಷಣದ ಅವಶ್ಯಕತೆಯಿದೆ. ಸಂಸ್ಕಾರ ರಹಿತ ಶಿಕ್ಷಣ ಸಮಾಜಕ್ಕೇ ಬಹು ಅಪಾಯಕಾರಿಯಾದುದಾಗಿದೆ. ಮುಂದಿನ ಭವಿಷ್ಯದ ಉದ್ದೇಶದಿಂದ ನಮ್ಮ ಗುರುಕುಲ ವ್ಯವಸ್ಥೆಯ ಶಿಕ್ಷಣವನ್ನು ಪ್ರತಿ ಮಗುವೂ ಹೊಂದುವಂತಾಗಬೇಕು ಎಂದರು.
ಸಭೆಯಲ್ಲಿ ಹಿರಿಯ ಪತ್ರಕರ್ತ ವಿನಾಯಕ ಭಟ್ಟ ಮೂರೂರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಸಭೆಯಲ್ಲಿ ಹವ್ಯಕ ಮಹಾಮಂಡಲ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ವಿದ್ಯಾರ್ಥಿ ಪ್ರಮುಖ ಈಶ್ವರಪ್ರಸಾದ ಕನ್ಯಾನ, ಮಂಗಳೂರು ಮಂಡಲಾಧ್ಯಕ್ಷ ಉದಯಶಂಕರ ನೀರ್ಪಾಜೆ, ನಿಕಟ ಪೂರ್ವ ಅಧ್ಯಕ್ಷ ಗಣೇಶ ಮೋಹನ ಕಾಶಿಮಠ, ಹೇರಂಬ ಶಾಸ್ತ್ರಿ, ರಮೇಶ ಭಟ್ಟ ಸರವು, ಶ್ರೀಕೃಷ್ಣ ಶರ್ವ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮುಂತಾದವರಿದ್ದರು.