ಹಲಗೂರು: ಬಜೆಟ್ ಎಂಬುದು ನಮ್ಮ ಜೀವನದ ವಿನ್ಯಾಸಗಳ ಆಲೋಚನೆಗಳಾಗಿವೆ. ನಮ್ಮ ಆಲೋಚನೆಗಳಿಗೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕಾದರೆ ಬಜೆಟ್ ಎಂಬುದು ನಮ್ಮ ಜೀವನದ ನಿರ್ವಹಣೆಯ ಲೆಕ್ಕಾಚಾರ ಆಗಿರಬೇಕು ಎಂದು ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಐಕ್ಯೂ ಎಸಿ ಮತ್ತು ಅರ್ಥಶಾಸ್ತ್ರ ವಿಭಾಗ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ರಾಷ್ಟ್ರಕ್ಕಾಗಲಿ, ಒಂದು ರಾಜ್ಯಕ್ಕಾಗಲಿ, ಒಂದು ಕುಟುಂಬಕ್ಕಾಗಲಿ ಒಂದು ವ್ಯವಸ್ಥೆಗಾಗಲಿ, ಒಬ್ಬ ವ್ಯಕ್ತಿಗಾಗಲಿ ಅಂದಾಜಿಲ್ಲದೆ ಯಾವುದನ್ನು ಬೆಳೆಸಲು ಹಾಗೂ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ನಮ್ಮ ಆದಾಯಕ್ಕಿಂತ ಹೆಚ್ಚಿನ ಜೀವನ ಕ್ರಮ ನಮ್ಮದಾಗಬಾರದು ಎಂದರು.
ಮಕ್ಕಳ ಮೇಲೆ ತಂದೆ-ತಾಯಿ ಅಪಾರ ಕಾಳಜಿ ಇಟ್ಟು ಸಮಗ್ರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಮಕ್ಕಳ ಬೆಳವಣಿಗೆಯೇ ತಂದೆ-ತಾಯಿಗಳ ಮುಂಗಡಪತ್ರವಾಗಿದೆ. ನೀವು ಶ್ರಮ ವಿಭಜನೆ ಮಾಡಿ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡಿ ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ನೀವು ನಿಮ್ಮದೇ ಆದ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ನಾವೆಲ್ಲರೂ ದೇಶದ ಅಭಿವೃದ್ಧಿಯಲ್ಲಿ ನಿರ್ವಹಣಾ ವೆಚ್ಚ ಹಾಗೂ ಬಂಡವಾಳ ವೆಚ್ಚಗಳ ಬಗ್ಗೆ ಸೂಕ್ತ ಗಮನ ಹರಿಸಬೇಕು. ನಾಳೆಯ ಭವಿಷ್ಯದ ಕಡೆ ಮುಂದಾಲೋಚನೆ ಇರಬೇಕು ಎಂದರು.
ಉಪನ್ಯಾಸಕಿ ಡಾ.ಸೀಮಾ ಕೌಸರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ತಾರಾ ಜಯಲಕ್ಷ್ಮೀ ಮಾತನಾಡಿದರು. ಉಪನ್ಯಾಸಕರಾದ ಡಾ. ಶಂಕರೇಗೌಡ, ಮಹೇಶ್ ಬಾಬು, ಗುರುಪ್ರಸಾದ್, ರವಿ, ಮಮತಾ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಧಾಬಿದರಿ, ಕುಮಾರಸ್ವಾಮಿ, ವಿದ್ಯಾರ್ಥಿ=ವಿದ್ಯಾರ್ಥಿನಿಯರು ಇತರರು ಇದ್ದರು.