ರಾಯಚೂರು: ಕನ್ನಡದ ಇತಿಹಾಸವನ್ನು ತಿಳಿದುಕೊಳ್ಳುವುದರ ಜತೆಗೆ ಕುಮಾರವ್ಯಾಸ, ಕುವೆಂಪು ಸೇರಿದಂತೆ ಇನ್ನಿತರರ ಸಾಹಿತ್ಯವನ್ನು ಓದದಿದ್ದರೆ ಜೀವನ ಅಪೂರ್ಣವಾಗಲಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರ ಸಾಲಿಮಠ ಹೇಳಿದರು.
ಸ್ಥಳೀಯ ಪೂರ್ಣಿಮಾ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘದಿಂದ ಗುರುವಾರ ಏರ್ಪಡಿಸಿದ್ದ ನವೆಂಬರ್ ನಂತರ ಕನ್ನಡ ಕಾರ್ಯಕ್ರಮದಲ್ಲಿ ಮಾತನಾಡಿ, ಆಂಗ್ಲ ಮಾಧ್ಯಮದ ವಿಜ್ಞಾನಿ, ವಾಣಿಜ್ಯ ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಕಾಳಜಿ ವಹಿಸಿ ನೆಲ, ಜಲದ ಋಣ ತೀರಿಸಬೇಕು ಎಂದರು.
ನವೆಂಬರ್ ತಿಂಗಳ ಬಂದರೆ ಸಾಕು ರಾಜ್ಯದ ತುಂಬಾ ಕನ್ನಡ ಕಾರ್ಯಕ್ರಮಗಳು ಎಲ್ಲೆಡೆ ಕಂಡು ಬರುತ್ತವೆ. ಆದರೆ ನವೆಂಬರ್ ನಂತರ ಕನ್ನಡ ಎನ್ನುವ ವಿಷಯ ಕುರಿತು ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಪೂರ್ಣಿಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಲ್.ಕೇಶವರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚುತ್ತಿದೆ. ನಮ್ಮವರು ಕೂಡಾ ಮಾತೃ ಭಾಷೆ ಬಗ್ಗೆ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಉಳಿದಿರುವುದು ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ನಾಗರಾಜ ಪಲಗುಲ ಮಾತನಾಡಿ, ಕನ್ನಡ ಭಾಷೆ, ನೆಲ, ಜಲದ ಬಗ್ಗೆ ನಮ್ಮ ಪ್ರೀತಿ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗದೆ ವರ್ಷವೀಡಿ ಇರುವಂತಾಗಬೇಕು. ಅಂದಾಗ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ವ್ಯವಸ್ಥಾಪಕ ರಾಕೇಶ ರಾಜಲಬಂಡಿ, ಸಂಘದ ಪದಾಕಾರಿಗಳಾದ ಸಂಗಮೇಶ ಮಂಗಾನವರ, ಡಾ.ಬಿ.ವಿಜಯರಾಜೇಂದ್ರ, ಸುರೇಶ ಕಲ್ಲೂರು, ಕೂರಾ ಶುಭಾ, ಬಿ.ಎಸ್.ಮಾಲತಿ, ವೈಶಾಲಿ ಪಾಟೀಲ್, ಜೆ.ಎಂ.ಶರಣಯ್ಯಸ್ವಾಮಿ, ರಾಜಾ ಶ್ರೀನಿವಾಸ, ಮಂಜುನಾಥ ಸಜ್ಜನ್ ಉಪಸ್ಥಿತರಿದ್ದರು.