ಮದ್ದೂರು ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಜರುಗಿದ ಸೊಬಗು 2024ರ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು, ವಿಶ್ರಾಂತ ಪ್ರಾಧ್ಯಾಪಕಿ ಡಾ.ಕಲಾಶ್ರೀ ಅಭಿನಂದಿಸಿದರು. ಡಾ.ಭಾರತಿ, ಸಂತೋಷ್, ಶ್ರೀನಿವಾಸ್ ಇದ್ದರು. 
ಜಿಲ್ಲೆ

ಸಾಧಿಸುವ ಛಲವಿದ್ದರೆ ಬದುಕು ಹಸನು

ಮದ್ದೂರು: ನಮ್ಮನ್ನು ನಾವು ಬದಲಾಯಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕೇ ಹೊರತು ಅದನ್ನು ಬೇರೆಯವರಿಂದ ನಿರೀಕ್ಷೆ ಮಾಡುವುದು ಜೀವನದ ಅತ್ಯಂತ ದೊಡ್ಡ ಸೋಲು ಎಂದು ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಪ್ರಾಧ್ಯಾಪಕಿ ಡಾ.ಕಲಾಶ್ರೀ ಅಭಿಪ್ರಾಯಪಟ್ಟರು.

ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸೊಬಗು 2024 ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬದುಕು ಸರಳವಾಗಿದೆ, ಆದರೆ ಅದನ್ನು ನಾವು ಸಂಕೀರ್ಣಗೊಳಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ನಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದು ಎಂದು ಹೇಳಿದ ಅವರು, ಆತ್ಮವಿಶ್ವಾಸ, ಜವಾಬ್ದಾರಿ, ಸಾಧಿಸುವ ಛಲಗಳಿದ್ದರೆ ಬದುಕು ಹಸನಾಗುತ್ತದೆ. ಸದಾ ಸಂತೋಷದಿಂದ ಕೂಡಿರುತ್ತದೆ ಎಂದರು.
ಮಹಿಳಾ ಸಂವೇದನೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರಲ್ಲದೆ ವಿದ್ಯಾರ್ಥಿಗಳು ಮುಂದಿನ ತಲೆಮಾರಿಗೆ ಯಾವ ರೀತಿ ನಿರ್ದೇಶನವಾಗಬೇಕೆಂದು ಎಳೆ ಎಳೆಯಾಗಿ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಮಾತನಾಡಿ, ವಿದ್ಯಾರ್ಥಿಗಳ ನಿಜವಾದ ಪರೀಕ್ಷೆ ಆರಂಭವಾಗುವುದು ಪದವಿಯ ನಂತರ, ಹಾಗಾಗಿ ವಿದ್ಯಾರ್ಥಿಗಳು ತಮ್ಮ ಬದುಕು ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಹೆಚ್ಚು ಅಧ್ಯಯನ, ಸಾಧಿಸುವ ಛಲ ಅವಶ್ಯಕ ಎಂದು ಹೇಳಿದರು.

ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿಗಳಾದ ನಂದೀಶ್, ನಂದನ್ ಕುಮಾರ್, ಮನ್ವಿತಾ ಹಾಗೂ ಸೌಂದರ್ಯ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಾಂಸ್ಕೃತಿಕ ಸಂಚಾಲಕಿ ಡಾ.ಟಿ.ವಿ.ಭಾರತಿ, ಕ್ರೀಡಾ ಸಂಚಾಲಕ ಶ್ರೀನಿವಾಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಕುಮಾರ್, ಎನ್‌ಎಸ್‌ಎಸ್ ಸಂಚಾಲಕ ಸಂತೋಷ್ ಇದ್ದರು.