ಡಾ. ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಕ್ಕಳಿಗೆ ನೋಟ್ ಬುಕ್ ವಿತರಿಸಿದರು. ಉಮೇಶ್, ಕೊಟ್ರೇಶ್, ಚೇತನಾ, ವಿಶ್ವನಾಥ್ ಇತರರಿದ್ದರು. 
ಜಿಲ್ಲೆ

ಸಂಸ್ಕಾರಯುತ ಶಿಕ್ಷಣದಿಂದ ಬದುಕು ಬಂಗಾರ

Shivamogga - Desk - Vinayakumar D B

ಶಿಕಾರಿಪುರ: ಯಾವ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದಿಂದ ಮಕ್ಕಳು ನಾಳಿನ ನಾಡದೀವಿಗೆ ಆಗಬಲ್ಲರು. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಕಾಳೇನಹಳ್ಳಿಯ ಶಿವಯೋಗಾಶ್ರಮದ ಡಾ. ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅಂಬಾರಗೊಪ್ಪದ ಶ್ರೀ ರೇವಣಸಿದ್ದೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ದಾನಿಗಳಾದ ಕೊಟ್ರೇಶಪ್ಪ, ಚೇತನಾ ದಂಪತಿ ನೀಡಿದ ಪುಸ್ತಕ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳ ಬದುಕು ಬಂಗಾರವಾಗುತ್ತದೆ. ಪಠ್ಯಗಳ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನಹರಿಸಬೇಕು ಎಂದರು.
ಬಾಲ್ಯ ಎನ್ನುವದು ಒಂದು ಅದ್ಭುತವಾದ ಮತ್ತು ಅತ್ಯಂತ ವಿಸ್ಮಯವಾದ ಕಾಲಘಟ್ಟ. ಅದು ಎಂದೆಂದಿಗೂ ಮರೆಯಲಾಗದಂತಹ ನೆನಪಿನ ಬುತ್ತಿ. ಮಕ್ಕಳ ಅಂತರಂಗದಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅನಾವರಣಕ್ಕೆ ಸೂಕ್ತವಾದ ವೇದಿಕೆಯನ್ನು ನಾವು ಕಲ್ಪಿಸಬೇಕು ಎಂದು ಹೇಳಿದರು. ಮುಖ್ಯಶಿಕ್ಷಕ ಉಮೇಶ್, ಕೊಟ್ರೇಶ್, ಚೇತನಾ, ವಿಶ್ವನಾಥ್ ಇತರರಿದ್ದರು.