ಜಿಲ್ಲೆ

ಧರ್ಮದ ದೀಪದಿಂದ ಬದುಕು ಬಂಗಾರ

ಲಕ್ಷ್ಮೇಶ್ವರ: ದೇವರು, ದೇವಮಾನವರಲ್ಲಿ ಅಚಲವಾದ ನಂಬಿಕೆ, ವಿಶ್ವಾಸವಿರಿಸಿಕೊಂಡರೆ ಅದು ಶ್ರೇಷ್ಠವಾದ ಫಲ ನೀಡುತ್ತದೆ. ಅವರ ಸನ್ನಿಧಿಯಲ್ಲಿ ಬೆಳಗುವ ಧರ್ಮದ ದೀಪದಿಂದ ಮನುಷ್ಯನಲ್ಲಿನ ಅರಿಷಡ್ವರ್ಗಗಳು ಕಳೆದು ಸುಜ್ಞಾನದ ಬೆಳಕು ಹರಿದು ಬದುಕು ಬಂಗಾರವಾಗುತ್ತದೆ ಎಂದು ಶ್ರೀ ಆನಂದಮಯಿ ಶಿರಡಿ ಸಾಯಿಬಾಬಾ ಮಂದಿರದ ಅರ್ಚಕ ಶ್ರೀ ಸಿದ್ಧಲಿಂಗಯ್ಯಶಾಸ್ತ್ರಿ ಹಿರೇಮಠ ಹೇಳಿದರು.

ಗುರುವಾರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕ, ಗಣಹೋಮ, ಮೃತ್ಯುಂಜಯ, ಬೃಹಸ್ಪತಿ ಹೋಮ, ಪಂಚಾರತಿ ಸಂಜೆ ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಸೇವೆ ನೆರವೇರಿಸಿ ಮಾತನಾಡಿದ ಅವರು, ಪರಿಶುದ್ಧ ಮತ್ತು ಸತ್ಯಧರ್ಮನಿಷ್ಠೆಯಿಂದ ತನ್ನ ಬಳಿ ಬರುವ ಭಕ್ತರ ಸಂಕಟಗಳನ್ನು ಸಂತ ಸದ್ಗುರು ಸಾಯಿಬಾಬಾ ಅವರು ದೂರ ಮಾಡಿ ಶಾಂತಿ, ಸಮೃದ್ಧಿ, ಸುಖ ನೆಮ್ಮದಿ ಕರುಣಿಸುತ್ತಾರೆ. ವ್ಯಕ್ತಿಯ ಲೌಕಿಕ ಜೀವನದ ದುಃಖ ಹೋಗಲಾಡಿಸಲು ಸಾಯಿಬಾಬಾರನ್ನು ಆರಾಧಿಸಿದರೆ ಅದು ಖಂಡಿತವಾಗಿಯೂ ಫಲ ನೀಡುತ್ತದೆ. ದೇವರೊಬ್ಬ ನಾಮಹಲವು. ಮಾಡುವ ಕಾರ್ಯದಲ್ಲಿ ದೇವರು, ಧರ್ಮವನ್ನು ಕಾಣಬೇಕು ಎಂದರು.

ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಮಾತನಾಡಿ, ಸಾಯಿಬಾಬಾರನ್ನು ಹಿಂದು, ಮುಸ್ಲಿಮರು ಆರಾಧಿಸುತ್ತಾರೆ. ಅವರ ಅನುಯಾಯಿಗಳು ಅವರನ್ನು ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸುತ್ತಾರೆ. ಅವರು ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ ಎಂದರು. ಕಾರ್ತಿಕೋತ್ಸವಕ್ಕೆ ಪಟ್ಟಣ, ಸುತ್ತಲಿನ ಗ್ರಾಮದಿಂದ ನೂರಾರು ಭಕ್ತರು ಆಗಮಿಸಿದ್ದರು. ಪುರಸಭೆ ಸದಸ್ಯರಾದ ರಾಮು ಗಡದವರ, ರಾಜಣ್ಣ ಕುಂಬಿ, ಅಶ್ವಿನಿ ಅಂಕಲಕೋಟಿ, ಮಂಜುನಾಥ ಮಾಗಡಿ, ಮುಖ್ಯಾಧಿಕಾರಿ ಮಹೇಶ ಹಡಪದ, ಶೇಖಣ್ಣ ಹತ್ತಿಕಾಳ, ಶಂಕರ ಬ್ಯಾಡಗಿ, ಸೋಮೇಶ ಉಪನಾಳ, ಪ್ರವೀಣ ಬೋಮಲೆ, ನೀಲಪ್ಪ ಶರಸೂರಿ, ನೀಲಕಂಠಪ್ಪ ಬಂಕಾಪುರ, ರಾಮು ಅಡಗಿಮನಿ, ಪದ್ಮನಾಭ ಶೆಟ್ಟಿ, ಅಣ್ಣಪ್ಪ ಸಂಶಿ, ಮಲ್ಲಪ್ಪ ಮುಳಗುಂದ, ಕೊಟ್ರೇಶ ಅಳವಂಡಿ, ತಿಪ್ಪಣ್ಣ ಹಡಪದ ಇದ್ದರು.