ಹುಬ್ಬಳ್ಳಿ: ಕತ್ತಲೆ ಕಳೆಯುವ ಬೆಳಕು ಎಂದರೆ ಜ್ಞಾನ. ಈ ಜ್ಞಾನದ ಬೆಳಕಿನಿಂದ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಹಿರಿಯ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್, ಗಾನತರಂಗ, ರುತು ಪ್ರಕಾಶನ, ಸಂಯುತ ಪ್ರತಿಷ್ಠಾನ ಆಶ್ರಯದಲ್ಲಿ ಇಲ್ಲಿಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕವಿ ಗುರುನಾಥ ಗಬ್ಬೂರ ಅವರ ‘ನವಿರುಭಾವದ ಗರಿ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮೂಲಭೂತ ಹುಡುಕಾಟವೇ ಜಿವನದ ತಿರುಳು. ಅಕ್ಷರದ ಒಡನಾಟ, ಸಾಹಿತ್ಯದ ಸ್ನೇಹವೇ ಶಾಶ್ವತವಾದದು. ಮುಂದಿನ ತಲೆಮಾರಿಗೆ ನಾವು ಈ ಪುಸ್ತಕ ಸಂಸ್ಕೃತಿ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ಅಕ್ಷರದ ಬದುಕು ಬಲು ಸುಂದರ ಎಂದರು.
ಸಾಹಿತಿ ಸೋಮು ರೆಡ್ಡಿ ಕೃತಿ ಪರಿಚಯಿಸಿ, ಕಾವ್ಯ ರಚನೆಯಾಗಬೇಕಾದರೆ ಆಳವಾದ ಅರ್ಥ, ರೂಪಕ, ಉಪಮೆಗಳು ಬೇಕು. ಇವೆಲ್ಲವೂ ಇದ್ದರೆ ಮಾತ್ರ ಕಾವ್ಯದ ಸೊಬಗು ಹೆಚ್ಚುತ್ತದೆ ಎಂದು ಹೇಳಿದರು.
ಕೃತಿಕಾರ ಗುರುನಾಥ ಗಬ್ಬೂರ ಮಾತನಾಡಿ, ಬರಹದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿ ಹೋಟೆಲ್ ಉದ್ಯಮದಿಂದ ಸಾಹಿತ್ಯ ಕ್ಷೇತ್ರಕ್ಕೆ ಬಂದ ಬಯನ್ನು ವಿವರಿಸಿದರು.
ಪ್ರಾಚಾರ್ಯೆ ಡಾ. ಸಂಧ್ಯಾ ಕುಲಕರ್ಣಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸುವ ಕಾರ್ಯ ಎಲ್ಲೆಡೆ ನಡೆಯಬೇಕು ಎಂದರು.
ಪತ್ರಕರ್ತ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿ, ಕೇಳುಗರ ಮನಸ್ಸು ತಟ್ಟುವಂತಹ ಕಾವ್ಯಗಳು ಹೊರಬರಬೇಕು. ಕಾವ್ಯಕ್ಕೆ ಓದುಗರ ಮನಸ್ಸನ್ನು ಬದಲಿಸುವ ಶಕ್ತಿ ಇರುತ್ತದೆ ಎಂದರು.
ಇದೇ ವೇಳೆ ಕವನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರಮುಖರಾದ ಅರುಣಕುಮಾರ ಹಬ್ಬು, ಸಿ.ಎಂ. ಚನ್ನಬಸಪ್ಪ, ವಿರೂಪಾಕ್ಷ ಕಟ್ಟಿಮನಿ, ಶ್ರೀಶೈಲ ಗೋಕಾವಿ, ರಾಜು ಹುನಗುಂದ, ಈರಣ್ಣ ವಿರಕ್ತಮಠ, ಅಶೋಕ ರಂಗೋಜಿ, ಪ್ರಕಾಶ ಕಡಮೆ ಇತರರು ಇದ್ದರು.
ರುತು ಗಬ್ಬೂರ ಪ್ರಾರ್ಥಿಸಿದರು. ರವೀಂದ್ರ ರಾಮದುರ್ಗಕರ ಸ್ವಾಗತಿಸಿದರು. ಡಾ. ವೀರೇಶ ಹಂಡಿಗಿ ನಿರೂಪಿಸಿದರು. ಡಾ.ಬಿ.ಎಸ್. ಮಾಳವಾಡ ವಂದಿಸಿದರು.