ಉಡುಪಿ: ಕಮಿಷನ್ ದರದ ಪುನರ್ ರಚನೆಯ ಹೆಸರಿನಲ್ಲಿ ನಿಗಮದ ಆಡಳಿತ ಮಂಡಳಿ ಪ್ರತಿನಿಧಿಗಳ ಒಟ್ಟಾರೆ ಕಮಿಷನ್ ಗಳಿಕೆ ಕಡಿತಗೊಳಿಸಿದೆ. ಇದರಿಂದ ಹೆಚ್ಚು ಪಾಲಿಸಿ ಮಾರಾಟ ಮಾಡುವ ಪ್ರತಿನಿಧಿಗಳನ್ನು ನಿರುತ್ಸಾಹಗೊಳಿಸುತ್ತದೆ. ಎಲ್ಲಾ ಪ್ರತಿನಿಧಿಗಳಿಗೆ ಸಮಾನವಾದ ಕಮಿಷನ್ ದರವನ್ನು ನೀಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಎಲ್ ಐ ಸಿ ಉಡುಪಿ ವಿಭಾಗೀಯ ಕೌನ್ಸಿಲ್ನ ಅಧ್ಯಕ್ಷ ಎ. ವಿಶ್ವನಾಥ್ ಗಟ್ಟಿ ವಗ್ಗ ಆಗ್ರಹಿಸಿದರು.
ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಫೆಡರೇಶನ್ ಉಡುಪಿ ವಿಭಾಗದ ನೇತೃತ್ವದಲ್ಲಿ ಜೀವ ವಿಮಾ ಪ್ರತಿನಿಧಿಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಸೋಮವಾರ ನಡೆದ ಧರಣಿ ಸಭೆಯಲ್ಲಿ ಮಾತನಾಡಿದರು.
ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂ. ಮರುಜಾರಿ, ವಿಮಾ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ಏರಿಕೆ, ಪ್ರೀಮಿಯಂ ಜಿಎಸ್ಟಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ವಿಭಾಗೀಯ ಕೌನ್ಸಿಲ್ನ ಕಾರ್ಯದರ್ಶಿ ಎಚ್. ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಗಂಗಾಧರ್ ಎನ್. ಕೋಟ್ಯಾನ್, ಕಾರ್ಯಕಾರಿ ಮಂಡಳಿಯ ಕಾಶಿನಾಥ ಪುತ್ರನ್, ಮಾಜಿ ಅಧ್ಯಕ್ಷ ಮುರುಳೀಧರ್ ಡಿ.ವಿ., ಶೇಖರ್ ಪೂಜಾರಿ, ವಂದನಾ ವಿಶ್ವನಾಥ, ಉಡುಪಿ ಶಾಖಾ ಅಧ್ಯಕ್ಷ ರಮೇಶ್ ಆಚಾರ್ಯ ಯು., ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಗಣೇಶ್ ಮೇಸ್ತ ಉಪಸ್ಥಿತರಿದ್ದರು.