ಜಿಲ್ಲೆ

ಮುತ್ತೂರು ಕೆರೆಗೆ ಜೀವಕಳೆ!, ಕಾಯಕಲ್ಪ ನೀಡಿದ್ದ ನಿಕಟಪೂರ್ವ ಡಿಸಿ ಸಿ.ಎಸ್.ಕರೀಗೌಡರ ಶ್ರಮ ಸಾರ್ಥಕ

ವೆಂಕಟರಾಜು ಎಸ್.ದೊಡ್ಡಬಳ್ಳಾಪುರ

ತಾಲೂಕಿನ ಬಹುತೇಕ ಕೆರೆಗಳಿಗೆ ಪುನಶ್ಚೇತನ ಕಾರ್ಯ ಜೀವಕಳೆ ತಂದುಕೊಟ್ಟಿದೆ.

ಜಿಲ್ಲೆಯ 25ಕ್ಕೂ ಹೆಚ್ಚು ಕೆರೆಗಳನ್ನು ಜನರ ಸಹಭಾಗಿತ್ವದಲ್ಲಿ ಪುನಶ್ಚೇತನ ಮಾಡಿದ್ದ ನಿಕಟಪೂರ್ವ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡರ ಕಾರ್ಯಕ್ಕೆ ಸಾರ್ಥಕತೆ ಲಭಿಸಿದೆ. ಪುನಶ್ಚೇತನಗೊಂಡ ಮೊದಲ ಕೆರೆಯಾಗಿ ಗುರುತಿಸಿಕೊಂಡಿದ್ದ ಮುತ್ತೂರು ಕೆರೆ ಈಗ ಬಹುತೇಕ ಭರ್ತಿಯಾಗಿದೆ. 20ಕ್ಕೂ ಹೆಚ್ಚು ವರ್ಷಗಳಿಂದ ನೀರಿಲ್ಲದೆ ರಿಯಲ್ ಎಸ್ಟೇಟ್ ಮಾಫಿಯಾಗೆ ಸಿಲುಕಿ ಇಲ್ಲೊಂದು ಕೆರೆ ಇದೆಯಾ ಎನ್ನುವಷ್ಟರ ಮಟ್ಟಿಗೆ ಮಾಯವಾಗಿತ್ತು. ಗಿಡ-ಗಂಟಿಗಳಿಂದ ತುಂಬಿದ್ದರಿಂದ ಈ ಜಾಗವನ್ನು ಜನತೆ ಮರೆತೇ ಬಿಟ್ಟಿದ್ದರು. ಪುಂಡರ ಅಡ್ಡೆಯಾಗಿದ್ದ ಕೆರೆಯಲ್ಲಿ ಈಗ ಸಂಪೂರ್ಣ ನೀರು ತುಂಬಿ ಜನರ ಕಣ್ಮನ ಸೆಳೆಯುತ್ತಿದೆ.

ಕೆರೆ ಅಭಿವೃದ್ಧಿಗೆ ಚಂದಾ ಎತ್ತಿದ್ದ ಜಿಲ್ಲಾಧಿಕಾರಿ: 2018ರಲ್ಲಿ ಬರಗಾಲದಿಂದ ನೀರಿಗಾಗಿ ಬವಣೆ ಕಾಡಿತ್ತು. ಭವಿಷ್ಯದಲ್ಲಿ ನೀರಿನ ಸಮಸ್ಯೆ ಮನಗಂಡು ಸಾರ್ವಜನಿಕರಿಗೆ ಕೆರೆಗಳ ಮಹತ್ವ ತಿಳಿಸಿ ಜನರಿಂದಲೇ ಕೆರೆಯ ಅಭಿವೃದ್ಧಿಗೆ ಹಣ ಸಂಗ್ರಹ ಮಾಡಿ ಅಭಿವೃದ್ಧಿಗೊಳಿಸಲಾಯಿತು. ಗಿಡ-ಗಂಟಿಗಳಿಂದ ಕೂಡಿದ್ದ ಕೆರೆ ಅಂಗಳದಲ್ಲಿ ಹೂಳು ತೆಗೆದು ರಾಜಕಾಲುವೆಗಳನ್ನು ದುರಸ್ತಿ ಮಾಡಲಾಗಿತ್ತು. ಈಗ ಕೊಡಿ ಹರಿಯುವ ಹಂತಕ್ಕೆ ಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗತೊಡಗಿದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್‌ರೆಡ್ಡಿ ಸಂತಸ ವ್ಯಕ್ತಪಡಿಸಿದರು.

ಕೆರೆಯ ಅಭಿವೃದ್ಧಿಯಲ್ಲಿ ನನ್ನ ಪಾತ್ರಕ್ಕಿಂತ ಜನರ ಸಹಭಾಗಿತ್ವ ಮುಖ್ಯವಾಗಿತ್ತು. ಮತ್ತಷ್ಟು ಕೆರೆಗಳಿಗೆ ನೀರು ಬಂದರೆ ನೀರಿನ ಅಭಾವ ನೀಗಿಸಲು ಪಟ್ಟ ಪರಿಶ್ರಮಕ್ಕೆ ಅರ್ಥ ಸಿಗುತ್ತದೆ. ಬರದ ಪ್ರದೇಶದಲ್ಲಿ ಜನರ ನೀರಿನ ಸಮಸ್ಯೆ ನಿಗಲಿದೆ. ಸಿ.ಎಸ್.ಕರಿಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಬಂದ ಪುಟ್ಟ ಹೋದ ಪುಟ್ಟ ಅಂತ ಅಧಿಕಾರಿಗಳ ಮಧ್ಯೆ ಕೆರೆಗಳ ಅಭಿವೃದ್ಧಿಯಂತ ಬೃಹತ್ ಯೋಜನೆ ಕೈಗೊಂಡು ಜನರು ಭಾಗಿಯಾಗುವಂತೆ ಮಾಡಿ, ಜನರಲ್ಲಿ ನಮ್ಮ ಕೆರೆ ಉಳಿದರೆ ನಮಗೆ ನೀರು ಎಂಬ ಅರಿವು ಮೂಡಿಸಿ ಕಳೆದು ಹೋಗಿದ್ದ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ. ರಾಜಶೇಖರ್, ಸ್ಥಳೀಯ