ಮೈಸೂರು; ಗಂಡ, ಹೆಂಡತಿಯ ಜಗಳ ಬಿಡಿಸಲು ಬಂದಿದ್ದ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ನಗರ ಲಷ್ಕರ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವಾಸವಿದ್ದ ಆಲ್ವೀನ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2020ರ ಅಕ್ಟೋಬರ್ 17ರಂದು ಈತ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದನ್ನು ಬಿಡಿಸಲು ಬಂದಿದ್ದ ಪಕ್ಕದ ಮನೆಯ ವಾಸಿ ಮಹಿಳೆಯನ್ನು ಆಲ್ಪೀನ್ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ಬಗ್ಗೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಈ ಪ್ರಕರಣದ ಕುರಿತು ವಿಚಾರಣೆ ಮಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಹಿರೇಮಠ ಅವರು, ಈತನಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ.
ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ವರ್ಷ ಸಾಮಾನ್ಯ ಸಜೆಗೆ ಆದೇಶಿಸಿ ತೀರ್ಪು ನೀಡಿದ್ದಾರೆ. ಅರ್ಜಿದಾರರ ಪರ ಸರ್ಕಾರಿ ಅಭಿಯೋಜಕ ಎಚ್.ಇ. ಚಿನ್ನಪ್ಪ ಮತ್ತು ರಂಜನಾರಾವ್ ವಾದ ಮಂಡಿಸಿದ್ದರು.
ಈ ಪ್ರಕರಣದಲ್ಲಿ ಅವಶ್ಯಕ ದಾಖಲಾತಿ ಸಂಗ್ರಹಿಸಿ, ಉತ್ತಮ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಡಿ.ಸುರೇಶ್‌ಕುಮಾರ್, ತನಿಖಾ ಸಹಾಯಕರಾದ ಎಎಸ್‌ಐ ಸಿದ್ದರಾಜು, ಸಿಬ್ಬಂದಿ ಲಿಂಗರಾಜು, ಸತ್ಯ, ಮಹೇಶ್, ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪ್ರಸನ್ನಕುಮಾರ್ ಶುಭಂಕರ್, ಜನಾದರ್ನ, ಚಂದ್ರು ಅವರ ಕಾರ್ಯವನ್ನು ನಗರದ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಶಂಶಿಸಿದ್ದಾರೆ.