ಕಾರವಾರ: ಅಂಕೋಲಾ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆ ಗ್ರಾಮದ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ನಗ, ನಗದು ದೋಚಿದ ನಾಲ್ವರಿಗೆ ಕಾರವಾರದ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 2.70. ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಆಂದ್ಲೆ ಗ್ರಾಮದ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ನಾರಾಯಣ ಬೊಮ್ಮಯ್ಯ ನಾಯಕ ಹಾಗೂ ಸಾವಿತ್ರಿ ನಾಯಕ ಎಂಬ ದಂಪತಿಯನ್ನು 2019 ರ ಡಿಸೆಂಬರ್ 20 ರ ರಾತ್ರಿ ಕಾಲು ಕಟ್ಟಿ ಹಾಕಿ ಆಯುಧಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತರ ತಮ್ಮನ ಮಗ ಅದೇ ಗ್ರಾಮದ ಸುಖೇಶ ಕುಮಾರ್, ಬೆಂಗಳೂರಿನ ವೆಂಕಟರಾಜು, ನಾಗಣ್ಣ, ಭರತಕುಮಾರ್ ಎಂಬುವವರನ್ನು ಅಂಕೋಲಾ ಠಾಣೆ ಪೊಲೀಸರು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಮೊಬೈಲ್ ಲೊಕೇಶನ್, ಸಿಸಿ ಕ್ಯಾಮರಾ ಫುಟೇಜ್ ಸೇರಿ 57 ಸಾಕ್ಷ್ಯಗಳನ್ನು, ವಿಚಾರಣೆ ನಡೆಸಿ, 55 ,ಮುದ್ದೆ ಮಾಲುಗಳನ್ನು ಪರಿಶೀ ಲಿಸಿದ ಜಿಲ್ಲಾ ನ್ಯಾಯಾಧೀಶರು ನಾಲ್ವರನ್ನು ಅಪರಾಧಿಗಳು ಎಂದು ಪರಿಗಣಿಸಿದ್ದಾರೆ. 3
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವಾ, ಕಾರವಾರ ಪಬ್ಲಿಕ್ ಪ್ರಾಸಿಕ್ಯೂಟರ್ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಹಾಗೂ ತಂಡ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ. ಅಂಕೋಲಾ ಠಾಣೆ ಎಎಸ್ ಐ ಮಹಾಬಲೇಶ್ವರ ಅವರ ಸಹಕಾರವನ್ನು ನ್ಯಾಯಾಲಯ ಶ್ಲಾಘಿಸಿದೆ.
ಇದನ್ನೂ ಓದಿ: ದೊಡ್ಡಪ್ಪನನ್ನು ಕೊಂದ ದುರುಳನಿಗೆ ಶಿಕ್ಷೆ ಪಕ್ಕಾ