ವಿಜಯಪುರ: ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.
ನಿಡಗುಂದಿ ತಾಲೂಕು ಇಟಗಿ ಗ್ರಾಮದ ಗುರಪ್ಪ ಭೀಮಪ್ಪ ಮೇಟಿ ಹಾಗೂ ನಂದಮ್ಮ ಮಾಳಪ್ಪ ದಳವಾಯಿ ಶಿಕ್ಷೆಗೆ ಒಳಗಾಗಿದ್ದು, ನಾಲ್ಕು ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.
2022 ಮೇ 9ರಂದು ಇಟಗಿ ಗ್ರಾಮದ ಜಮೀನಿನ ಶೆಡ್‌ನಲ್ಲಿ ಕವಿತಾ ಭೀಮಪ್ಪ ಮೇಟಿ ಎಂಬುವರ ಕೊಲೆಯಾಗಿತ್ತು. ಈಕೆ ಭೀಮಪ್ಪ ಮೇಟಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈಕೆಯ ಮಾವ ಗುರಪ್ಪ ಹಾಗೂ ನಾದಿನಿ ನಂದಮ್ಮ ಕಿರುಕುಳ ನೀಡಿದ್ದಲ್ಲದೇ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರು. ಮುಂದುವರಿದು ಗುರಪ್ಪ ಹಾಗೂ ನಂದಮ್ಮ ಸೇರಿ ಕೊಲೆ ಮಾಡಿ ಬಾವಿಗೆ ಎಸೆದಿದ್ದರು.
ಈ ಬಗ್ಗೆ ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎ. ಮೋಹನ್ ಅವರು ಗುರಪ್ಪ ಭೀಮಪ್ಪ ಮೇಟಿ ಹಾಗೂ ನಂದಮ್ಮ ಮಾಳಪ್ಪ ದಳವಾಯಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ವನಿತಾ ಎಸ್.ಇಟಗಿ ವಾದ ಮಂಡಿಸಿದ್ದರು.