ಮಂಡ್ಯ: ವರದಕ್ಷಿಣೆ ಕಿರುಕುಳ ನೀಡುವುದರ ಜತೆಗೆ ಪತ್ನಿ ಮಾಡಿದ್ದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಹಾಗೂ ಎರಡೂವರೆ ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮಳವಳ್ಳಿ ತಾಲೂಕು ಬೆಳಕವಾಡಿ ಗ್ರಾಮದ ಲೇ.ಲಿಂಗಪ್ಪ ಅವರ ಪುತ್ರ ಮಹದೇವಸ್ವಾಮಿ (48) ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ಬೆಳಕವಾಡಿ ಗ್ರಾಮದ ಗೀತಾ ಅವರನ್ನು ಅದೇ ಗ್ರಾಮದ ಮಹದೇವಸ್ವಾಮಿ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮೂರು ವರ್ಷ ಅನ್ಯೋನ್ಯವಾಗಿದ್ದ ದಂಪತಿ, ನಂತರದಲ್ಲಿ ಬಿರುಕು ಮೂಡಿ ಗೀತಾ ಅವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದನು.
2020ರ ಫೆ.21ರ ರಾತ್ರಿ 9ರ ಸಮಯದಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಗೀತಾ ಅವರೊಂದಿಗೆ ಜಗಳ ತೆಗೆದು ಗೀತಾ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನು ನೋಡಿದ ಅಕ್ಕಪಕ್ಕದ ನಿವಾಸಿಗಳು ಗೀತಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ವೈದ್ಯರ ಸಮಕ್ಷಮ ಗಾಯಾಳು ಗೀತಾ ಅವರು ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡ ಅಂದಿನ ವೃತ್ತ ನಿರೀಕ್ಷಕರಾದ ಧರ್ಮೇಂದ್ರ ಹಾಗೂ ಧನರಾಜ್ ಅವರು ತನಿಖೆ ನಡೆಸಿ 2020ರ ಜೂ.3ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಮಹದೇವಸ್ವಾಮಿ ತಪ್ಪಿತಸ್ಥನೆಂದು ಪರಿಗಣಿಸಿ ಕಲಂ 302 ಐಪಿಸಿರಲ್ಲಿ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ದಂಡ, ಕಲಂ 498(ಎ) ರಲ್ಲಿ ಎರಡು ವರ್ಷ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ವೀಣಾ ಮತ್ತು ವಿಜಯಲಕ್ಷ್ಮೀ ಅವರು ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು. ಅಪರಾಧಿಗೆ ಶಿಕ್ಷೆ ಆಗಲು ತನಿಖೆ ನಡೆಸಿದ ಹಲಗೂರು ವೃತ್ತ ಮತ್ತು ಬೆಳಕವಾಡಿ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.