ಕುಷ್ಟಗಿ: ದೇಹ ಅಂದಮೇಲೆ ಅನಾರೋಗ್ಯ, ಜೀವನ ಅಂದ ಮೇಲೆ ಕಷ್ಟಗಳು ಸಾಮಾನ್ಯ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಮಠದಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಿಮಿತ್ತ ನಡೆಯುತ್ತಿರುವ ಪುರಾಣ ಪ್ರವಚನ ಕಾರ್ಯಕ್ರದ ಸಾನ್ನಿಧ್ಯ ವಹಿಸಿ ಬುಧವಾರ ಸಂಜೆ ಮಾತನಾಡಿದರು. ಸೂರ್ಯನ ತಾಪ ಹೆಚ್ಚೆಂದು ಸೂರ್ಯನನ್ನೇ ನಾಶ ಮಾಡಲು ಸಾಧ್ಯವಿಲ್ಲ. ತಾಪ ಕಡಿಮೆ ಮಾಡಲು ಕೊಡೆ ಹಿಡಿದಂತೆ ಕಷ್ಟಗಳ ತಾಪ ಕಡಿಮೆ ಮಾಡಲು ಶರಣರು, ಸಂತರ ಮಾತುಗಳೆಂಬ ಕೊಡೆ ಹಿಡಿಯಬೇಕು. ಜನರಾಡುವ ಕೆಟ್ಟ ಮಾತುಗಳು ವರ್ಷಗಟ್ಟಲೇ ನಮ್ಮನ್ನು ಆಳುತ್ತವೆ. ಶರಣರು ಆಡಿದ ಮಾತುಗಳು 10 ನಿಮಿಷವೂ ಆಳದಿರುವುದು ದುರ್ದೈವ. ಶರಣರು, ಸಂತರ ಮಾತುಗಳನ್ನು ಆಲಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕತೆ ಕಾಣಬೇಕು ಎಂದರು. ಶ್ರೀಮಠದ ನಿಯೋಜಿತ ಪಟ್ಟಾಧಿಕಾರಿ ವಿಶ್ವಾರಾಧ್ಯ ದೇವರು ಇದ್ದರು. ಪಟ್ಟಣದ ನೂರಾರು ಜನ ಪಾಲ್ಗೊಂಡಿದ್ದರು.