ಜಿಲ್ಲೆ

ಧಗ್ರಾಯೋದಿಂದ ಕೆರೆಗಳಿಗೆ ಜೀವಕಳೆ

ಹಿರೇಕೆರೂರ: ಅತ್ಯಂತ ಅವಶ್ಯಕತೆಯಿರುವ ಜೀವಜಲ ಸಂಗ್ರಹ ಮತ್ತು ಅದರ ಅಭಿವೃದ್ಧಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಹತ್ತರ ಯೋಜನೆ ಜಾರಿಗೆ ತರುವ ಮೂಲಕ ಅನೇಕ ಕೆರೆಗಳಿಗೆ ಜೀವಕಳೆ ತಂದಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಸಲ್ಮಾ ಬೊಗಳೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ತಾಲೂಕಿನ ಚಿಕ್ಕೇರೂರ ಗ್ರಾಪಂ ವ್ಯಾಪ್ತಿಯ ಬೆನಕನಕೆರೆ ಹೂಳೆತ್ತುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ಕೆರೆಯಲ್ಲಿ ಹೂಳು ತುಂಬಿದೆ. ಕೆರೆ ನೀರು ಮಲಿನವಾಗಿ ಉಪಯೋಗಕ್ಕೆ ಬಾರದ ರೀತಿಯಲ್ಲಿದ್ದು, ಅನುದಾನ ಕೊರತೆಯಿಂದ ಈ ಕಾರ್ಯ ನಡೆದಿರಲಿಲ್ಲ. ನಮ್ಮ ಗ್ರಾಮಸ್ಥರು ಕೆರೆ ಅಭಿವೃದ್ಧಿಪಡಿಸಲು ಧರ್ಮಸ್ಥಳ ಯೋಜನೆಗೆ ಬೇಡಿಕೆ ಸಲ್ಲಿಸಿದ್ದರಿಂದ ಕೆರೆ ಕಾಮಗಾರಿಗೆ ಮಂಜೂರಾತಿ ನೀಡಿರುವುದು ಸಂತಸದ ಸಂಗತಿ. ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ನಮ್ಮೂರು ನಮ್ಮ ಕೆರೆ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 805 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 35, ಹಿರೇಕೆರೂರ ತಾಲೂಕಿನಲ್ಲಿ 5 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಕೆರೆ ಪರಿಸರ ಸ್ವಚ್ಛವಾಗಿದ್ದರೆ ನೀರೂ ಸ್ವಚ್ಛವಾಗಿರುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಶಿವರಾಜ ಹರಿಜನ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮೂಲಕ ಬಡ ಜನರ ಮತ್ತು ಸಮುದಾಯ ಅಭಿವೃದ್ಧಿಗಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿಯೂ ಜನರಿಗೆ ಅನುಕೂಲವಾಗುತ್ತಿದೆ. ನಮ್ಮೂರಿನಲ್ಲೇ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ, ರುದ್ರಭೂಮಿ ಅಭಿವೃದ್ಧಿ, ಕಾಯಿಲೆಗೆ ಒಳಗಾದವರಿಗೆ ವಾಟರ್ ಬೆಡ್, ವ್ಹೀಲ್‌ಚೆರ್, ಅಸಹಾಯಕರಿಗೆ ಮಾಸಾಶನ ಹೀಗೆ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಿದೆ ಎಂದರು.

ಯೋಜನಾಧಿಕಾರಿ ಮಂಜುನಾಥ ಎಂ., ಪಿಡಿಒ ವೀರನಗೌಡ ಪಾಟೀಲ, ಕೆರೆ ಸಮಿತಿ ಅಧ್ಯಕ್ಷ ಪರಮೇಶಪ್ಪ ಲಕ್ಕಪ್ಪಳ್ಳವರ, ಉಪಾಧ್ಯಕ್ಷ ಮಹೇಶ ಮತ್ತಳ್ಳಿ, ದೊಡ್ಡಮಲ್ಲಪ್ಪ ಕಾರಗಿ, ಮಂಜುನಾಥ ಕಾರಗಿ, ಶಿವಾನಂದ ಬಣಕಾರ, ಕರಬಸಪ್ಪ ಬಣಕಾರ, ಮಲ್ಲಿಕಾರ್ಜುನ ಲಕ್ಕಪ್ಪಳ್ಳವರ, ಚಂದ್ರಪ್ಪ ದ್ಯಾಮನಗೌಡ, ಗೀತಾ ಹೊಸಗೌಡ್ರ, ಲತಾ ದಮ್ಮಳ್ಳಿ, ಇತರರು ಇದ್ದರು. ಧರ್ಮಪ್ಪ ಜೋಗೇರ, ಅಶೋಕ ಎಂ.ಪಿ. ನಿರ್ವಹಿಸಿದರು.