ಚಿಕ್ಕೋಡಿ: ತಂದೆ ಕೊಟ್ಟ ಪೆಟ್ಟು, ಗುರು ಕೊಟ್ಟ ಏಟು ಸಮನಾಗಿ ಸ್ವೀಕರಿಸಿದ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಯಾಗುತ್ತಾನೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಚಂದ್ರಶೇಖರ ಅರಭಾಂವಿ ಹೇಳಿದರು.
ಪಟ್ಟಣದ ಸಿಎಲ್‌ಇ ಸಂಸ್ಥೆಯ ಬಿ.ಸಿ.ಗಂಗಾಲ ಮಹಾವಿದ್ಯಾಲಯದ ಪದವಿ ಸಭಾಂಗಣದಲ್ಲಿ ಗುರು ಪೂರ್ಣಿಮೆ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಬಿ.ಸಿ.ಗಂಗಾಲ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಕ್ಕಳಿಗೆ ತಾಯಿ ಜೀವ ಕೊಟ್ಟರೆ ಗುರು ಜೀವನ ರೂಪಿಸುತ್ತಾನೆ. ಮಗನಿಗೆ ತಾತ್ಕಾಲಿಕ ತುತ್ತು ಕೊಟ್ಟರೆ ಗುರುಗಳು ಕೊಟ್ಟ ಬುತ್ತಿಯ ಗಂಟು ಇಡೀ ಜೀವಮಾನ ಇರುವವರೆಗೆ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಡಾ.ಸುರೇಶ ಉಕ್ಕಲಿ ಮಾತನಾಡಿದರು. ಡಾ.ಆನಂದ ಕುಲಕರ್ಣಿ, ಎಸ್.ಎಸ್.ಪಾಟೀಲ, ಎಸ್.ಎಸ್.ಮಾರಿಹಾಳ, ಎಸ್.ಎಸ್.ಕುಂಬಾರ, ಸಂಜಯ ಶಿರಗುಪ್ಪೆ, ದೀಪಕ ಹವಳೆ, ಲಕ್ಷ್ಮೀ ಹಿರೇಮಠ, ಪರಿಮಳಾ ಕೇರಿಮನಿ, ಅಂಜಲಿ ಕಟ್ಟಿಕರ, ಲಕ್ಷ್ಮಣ ಹೊಸಮನಿ ಇತರರಿದ್ದರು.