ಜಿಲ್ಲೆ

ಯೋಗದಲ್ಲಿದೆ ಜೀವನ ಶಿಕ್ಷಣ

ವೀರೇಶ ಸೌದ್ರಿ

ಭಟ್ಕಳ: ಯೋಗವೆಂದರೆ ಕೇವಲ ಆಸನಗಳಷ್ಟೇ ಅಲ್ಲ, ಶರೀರದ ಸಮಸ್ಯೆಗಳ ನಿವಾರಣೆಯ ಜತೆಗೆ ಮಾನಸಿಕ ಸದೃಢತೆ ಒಳಗೊಂಡಿರುತ್ತದೆ. ಮನುಷ್ಯನ ಸಂಪೂರ್ಣ ಜೀವನದ ಕುರಿತು ಯೋಗವು ಪೂರ್ಣ ವಿಚಾರಗಳನ್ನು ಹೊಂದಿರುತ್ತದೆ ಎಂದು ಆಧ್ಯಾತ್ಮಿಕ ಮಾರ್ಗದರ್ಶಕ ಬೈಲೂರು ಗಣೇಶ ಭಟ್ ಹೇಳಿದರು.

ಪಟ್ಟಣದ ಶ್ರೀ ನಾಗಮಾಸ್ತಿ ಕ್ಷೇತ್ರದಲ್ಲಿ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಕಾಪಾಡಿಕೊಳ್ಳುವ ನೆಪದಲ್ಲಿ ಅನಾರೋಗ್ಯಕರ ವಾತಾವರಣದಲ್ಲಿ ದೈಹಿಕ ಕಸರತ್ತು ನಡೆಸಿದರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಪ್ರಾಕೃತಿಕ ಹಾಗೂ ದೈವಿಶಕ್ತಿ ಕ್ಷೇತ್ರದಲ್ಲಿ ಯೋಗಾಧ್ಯಾಯನ ಮೂಲಕ ಮಾನಸಿಕ, ಬೌದ್ಧಿಕ, ದೈಹಿಕ ಆರೋಗ್ಯವನ್ನು ಗಳಿಸಿಕೊಳ್ಳಬಹುದು. ಈ ಕ್ಷೇತ್ರಕ್ಕೆ ಕಾಲಿರಿಸಿದ ನಂತರ ಧಾರ್ಮಿಕ ಉಪನ್ಯಾಸವನ್ನು ಹಾಗೂ ಭಗವದ್ಗೀತೆ ಪ್ರವಚನವನ್ನು ಆರಂಭಿಸುವ ಪ್ರೇರಣೆಯಾಗುತ್ತಿದ್ದು, ಶೀಘ್ರದಲ್ಲಿಯೇ ಆರಂಭಿಸೋಣ ಎಂದರು.

ಕ್ಷೇತ್ರಭಿವೃದ್ಧಿ ಮಂಡಳಿ ಅಧ್ಯಕ್ಷ ಸತೀಶ ಕುಮಾರ ನಾಯ್ಕ ಮಾತನಾಡಿ, ಶ್ರೀ ಕ್ಷೇತ್ರದ ಆವರಣದಲ್ಲಿ ಯೋಗ ಶಿಬಿರ ಪ್ರಾರಂಭಿಸಲು ಬಹಳ ದಿನಗಳಿಂದ ಸಂಕಲ್ಪ ಮಾಡಲಾಗಿತ್ತು ಎಂದರು.

ಯೋಗ ಗುರು ಗೋವಿಂದ ದೇವಾಡಿಗ ಮಾತನಾಡಿ, ದೇಹಕ್ಕೆ ಯೋಗ, ವ್ಯಾಯಾಮ ಎಷ್ಟು ಅಗತ್ಯವೋ ಅಷ್ಟೇ ಸಂಸ್ಕಾರ, ಸಂಸ್ಕೃತಿಯೂ ಎಂದರು.

ಪುರಸಭೆ ಸದಸ್ಯ ನಾಗರಾಜ ಎಂ. ನಾಯ್ಕ ಸ್ವಾಗತಿಸಿದರು. ಜಿ.ಪಿ. ಅಂಕಿತ ರಾಜಶೇಖರ್ ಸ್ವಾಗತ ಗೀತೆ ಹಾಡಿದರು. ಸತೀಶ್ ಕುಮಾರ್ ನಾಯ್ಕ, ರಾಮಣ್ಣ ಬಳಗಾರ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ ದೇವಾಡಿಗ ವಂದಿಸಿದರು.