ಜಿಲ್ಲೆ

ಬದುಕಿಗೆ ಮಾರಕವಾಗದಿರಲಿ ತಂತ್ರಜ್ಞಾನ - ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಜಿ.ಆಲ್ಗೂರ್ ಸಲಹೆ

ಬಳ್ಳಾರಿ: ವಿಜ್ಞಾನ ಕ್ಷೇತ್ರದಲ್ಲಿನ ಅನ್ವೇಷಣೆಯಿಂದ ತಂತ್ರಜ್ಞಾನ ವೇಗವಾಗಿ ಪ್ರಗತಿ ಹೊಂದುತ್ತಿದೆ. ಆದರೆ, ಕೆಲವು ಕಡೆ ದುರ್ಬಳಕೆ ಆಗುತ್ತಿರುವುದು ಖೇದಕರ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಜಿ.ಆಲ್ಗೂರ್ ಬೇಸರ ವ್ಯಕ್ತಪಡಿಸಿದರು.

ನಗರದ ವೀರಶೈವ ಮಹಾವಿದ್ಯಾಲಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಜೀವಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳು ಸಂಯುಕ್ತವಾಗಿ ಅಂತರ ಶಿಸ್ತಿಯ ಅಧ್ಯಯನ ಕೈಗೊಳ್ಳುತ್ತಿರುವುದು ಮಾನವನ ಕಲ್ಯಾಣದಲ್ಲಿ ಮಹತ್ವದ ಪಾತ್ರವಹಿಸಿವೆ. ಅಂತಹ ಅಧ್ಯಯನಗಳು ಜೀವಿಯ ಶರೀರದಲ್ಲಿನ ಅನಾರೋಗ್ಯ ಪತ್ತೆ ಹಚ್ಚಿ ಸೂಕ್ತ ಔಷಧಗಳನ್ನು ಒದಗಿಸುತ್ತಿವೆ. ಆದರೆ, ವಿಜ್ಞಾನದಿಂದ ಅಭಿವೃದ್ಧಿಯಾದ ತಂತ್ರಜ್ಞಾನವನ್ನು ಕೆಲವರು ದುರ್ಬಳಕೆ ಮಾಡಿಕೊಂಡು ವಿನಾಶದ ಹಾದಿಗೆ ತಲುಪುತ್ತಿದ್ದಾರೆ. ಅಂಥವರನ್ನು ಪೊಲೀಸ್ ವ್ಯವಸ್ಥೆ ಮಟ್ಟ ಹಾಕಬೇಕಿದೆ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಗೋನಾಳ ರಾಜಶೇಖರಗೌಡ ಮಾತನಾಡಿದರು. ಬೆಂಗಳೂರು ವಿವಿ ರಸಾಯನಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಸುರೇಶ್ ಬಾಬು, ಪ್ರಾಚಾರ್ಯ ಡಾ.ಜಿ.ರಾಜಶೇಖರ, ಸಂಘಟನಾ ಕಾರ್ಯದರ್ಶಿ ಡಾ ಟಿ.ಆರ್.ರವಿಕುಮಾರ್, ಡಾ.ಮೇಘರಾಜ ಎಚ್., ನಿರುಪಮಾ, ಸೌಜನ್ಯ ಇತರರಿದ್ದರು.