ಚಿಕ್ಕಮಗಳೂರು: ಪಿಂಚಣಿದಾರರು ಇನ್ನು ಮುಂದೆ ಜೀವಿತ ದೃಢೀಕರಣ ಪತ್ರಕ್ಕಾಗಿ ಅಲೆಯಬೇಕಿಲ್ಲ. ಅಂಚೆ ಇಲಾಖೆ ಹೊಸ ಯೋಜನೆ ರೂಪಿಸಿದ್ದು, ಇನ್ನು ಮುಂದೆ ಅಂಚೆಯಣ್ಣನೇ ಮನೆ ಬಾಗಿಲಿಗೆ ಬಂದು ಜೀವಿತ ಪ್ರಮಾಣ ಪತ್ರ ನೀಡಲಿದ್ದಾನೆ.
ಅಂಚೆ ಇಲಾಖೆ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಮೂಲಕ ಜೀವಿತ ಪ್ರಮಾಣ ಪತ್ರ ವಿತರಣೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಆರಂಭಿಸಿದೆ. ಇದರಿಂದ ವರ್ಷಕ್ಕೊಮ್ಮೆ ಬ್ಯಾಂಕಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸುವವರ ಕೆಲಸ ಸುಲಭವಾಗಲಿದೆ.
ವರ್ಷಕ್ಕೊಮ್ಮೆ ಪಿಎಫ್ ಕಚೇರಿಗೆ ಹೋಗಿ ಜೀವಿತ ದೃಢೀಕರಣ ಪತ್ರ ಸಲ್ಲಿಸುವುದೇ ಕಷ್ಟವಾಗಿತ್ತು. ಅದಕ್ಕೆ ಸಹಾಯಕರೊಬ್ಬರ ನೆರವು ಸಹ ಬೇಕಾಗುತ್ತಿತ್ತು. ಅದರಲ್ಲೂ ಕರೊನಾ ಸಂಕಷ್ಟ ಕಾಲದಲ್ಲಿ ವಯಸ್ಸಾದವರು ಹೊರ ಬರುವುದು ಸುರಕ್ಷಿತವೂ ಅಲ್ಲ. ಹೊಸ ವ್ಯವಸ್ಥೆಯಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಸಿಕ್ಕಿದಂತಾಗಿದೆ.ಸಕಾಲದಲ್ಲಿ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಸಮಸ್ಯೆಯಾಗಿ ಪಿಂಚಣಿ ಹಣ ತಡೆಹಿಡಿಯಲಾಗುತ್ತದೆ ಎನ್ನುವ ಆತಂಕ ಸಹ ಅವರಿಗೆ ಇನ್ನು ಮುಂದೆ ಆಗದು.
ಹೀಗೆ ದೊರೆಯಲಿದೆ ಸೇವೆ
ಅಂಚೆ ಪೇದೆಗಳ ಬಳಿ ಇರುವ ಮೈಕ್ರೋ ಎಟಿಎಂ ಯಂತ್ರದ ಮೂಲಕ ಜೀವಿತ ಪ್ರಮಾಣ ಪತ್ರ ನೀಡಲಾಗುತ್ತದೆ. ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಈ ಸೇವೆ ಸುಲಭವಾಗಿ ಸಿಗುತ್ತದೆ ಎಂದು ಅಂಚೆ ಅಧೀಕ್ಷಕ ಬಿ.ಶಂಕರ್ ತಿಳಿಸಿದ್ದಾರೆ.
ಬಯೋಮೆಟ್ರಿಕ್ ಮೂಲಕ ಪಿಂಚಣಿದಾರರ ಮನೆ ಬಾಗಿಲಲ್ಲೇ ಅವರ ಹೆಬ್ಬೆಟ್ಟಿನ ಮಾದರಿ ಪಡೆದು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಮುಂದಿನ ಒಂದು ವರ್ಷ ಪಿಂಚಣಿದಾರರ ಖಾತೆಗೆ ಹಣ ಜಮೆಯಾಗುತ್ತದೆ. ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ ಎನ್ನುತ್ತಾರೆ ಅವರು.
ಹೊಸದಾಗಿ ಜೀವಿತ ಪ್ರಮಾಣ ಪತ್ರ ಪಡೆಯುವವರು ಪಿಂಚಣಿ ಗುರುತಿನ ಚೀಟಿ, ಪಿಂಚಣಿ ಪೇಮೆಂಟ್ ಆರ್ಡರ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಮತ್ತು ಆಧಾರ್ ಸಂಖ್ಯೆ ನೀಡಬೇಕಾಗುತ್ತದೆ. ಮಾಹಿತಿಗೆ ನಗರದ ಪ್ರಧಾನ ಅಂಚೆ ಕಚೇರಿಯ ಪೋಸ್ಟಲ್ ಪೇಮೆಂಟ್ಸ್ ಬ್ಯಾಂಕ್‍ನ ಹಿರಿಯ ವ್ಯವಸ್ಥಾಪಕ(ಮೊ: 8618034580)ರನ್ನು ಸಂಪರ್ಕಿಸಬಹುದು.