ಜಿಲ್ಲೆ

ಅಲೆಮಾರಿ ಮಕ್ಕಳಿಗಿಲ್ಲ ಅಕ್ಷರ ಭಾಗ್ಯ

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಸ್ಥಿರ ಬದುಕಿನ ನೆಲೆ ಇಲ್ಲದೆ ಅಲೆಮಾರಿ ಕುಟುಂಬಗಳ ಮಕ್ಕಳ ಬದುಕು ಶೋಚನಿಯವಾಗಿದೆ ಎಂಬುದಕ್ಕೆ ನಗರದ ಹೊರವಲಯದ ಪಾವಗಡ ರಸ್ತೆಯ ರೈಲ್ವೆ ಗೇಟ್ ಸಮೀಪ ಟೆಂಟ್‌ಗಳಲ್ಲಿ ವಾಸವಿರುವ ಹತ್ತಾರು ಕುಟುಂಬಗಳ ಜೀವನವೇ ಸಾಕ್ಷಿಯಾಗಿದೆ.

ಆಂಧ್ರ ಪ್ರದೇಶದ ಧರ್ಮಾವರಂ ಜಿಲ್ಲೆಯಿಂದ ವಲಸೆ ಬಂದಿರುವ ಈ ಕುಟುಂಬಗಳು ಕಳೆದ 2 ತಿಂಗಳಿಂದ ಇಲ್ಲಿಯೇ ಬಿಡಾರ ಹೂಡಿವೆ. ವೈರ್ ಬಳಸಿ ಬುಟ್ಟಿ ಹೆಣೆದು ಜೀವನ ನಡೆಸುವುದು ಇವರ ಮೂಲ ಕಸುಬು.

ವಿವಿಧ ಬಣ್ಣದ ವೈರ್‌ಗಳನ್ನು ಬಳಸಿ ಬುಟ್ಟಿ ಹೆಣೆದು 50 ರೂ.ಗೆ ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಐದಾರು ಅಲೆಮಾರಿ ಕುಟುಂಬಗಳಲ್ಲಿ 10 ವರ್ಷದೊಳಗಿನ 12 ಮಕ್ಕಳಿದ್ದಾರೆ.

ಇವರಿಗೆ ಶಿಕ್ಷಣವಿಲ್ಲ. ಪ್ರಸ್ತುತ ಮಳೆಗಾಲದಿಂದ ರಕ್ಷಣೆ ಪಡೆಯಲು ಸೂಕ್ತ ಗುಡಿಸಲು ವ್ಯವಸ್ಥೆ ಇಲ್ಲ. ಕೌದಿ ಹೆಣೆದ ಬಟ್ಟೆಗಳನ್ನು ಬಳಸಿ ಟೆಂಟ್ ಕಟ್ಟಿಕೊಳ್ಳಲಾಗಿದೆ.

ಮಕ್ಕಳಿಗೆ ಶಿಕ್ಷಣ ಏಕೆ ಕೊಡಿಸುತ್ತಿಲ್ಲ ಎಂದರೆ ನಮಗೆ ಎಲ್ಲೂ ಮನೆ, ಜಮೀನು ವ್ಯವಸ್ಥೆ ಇಲ್ಲ. ಸರ್ಕಾರದವರು ಕೊಟ್ಟೋರಿಗೇ ಮನೆ, ಮಠ ಕೊಡ್ತಾರೆ. ನಮಗ್ಯಾರೂ ಮನೆ, ಜಮೀನು ಕೊಟ್ಟಿಲ್ಲ.

ಸ್ವಲ್ಪ ದಿನ ಆಂಧ್ರದಲ್ಲಿ ಇರ್ತಿವಿ, ಇತ್ತಕಡೆ ಬಂದ್ರೆ ದುರ್ಗ, ಮೈಸೂರು ಕಡೆ ಹೋಗಿ ಬುಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತೇವೆ ಎನ್ನುತ್ತಾರೆ.

ಅಲೆಮಾರಿ ಕುಟುಂಬಗಳ ಬದುಕು ಸುಧಾರಣೆಗೆ ಶಿಕ್ಷಣ ಆಧಾರ ಆಗಬೇಕು. ಐದಾರು ತಿಂಗಳು ನೆಲೆ ನಿಲ್ಲುವ ಕಡೆಯಾದರೂ ತಾತ್ಕಾಲಿಕ ಟೆಂಟ್ ಶಾಲೆ ತೆರೆದು ಶಿಕ್ಷಣ ನೀಡಬೇಕು.ಕೆ. ಜಗದೀಶ್ ಸೂರನಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲೆಮಾರಿ ಕುಟುಂಬಗಳನ್ನು ಭೇಟಿ ಮಾಡಿ, ಮಕ್ಕಳನ್ನು ಸಮೀಪದ ಶಾಲೆಗೆ ಕಳುಹಿಸಲು ಮನವೊಲಿಸುತ್ತೇವೆ. ಇಲಾಖೆಯ ಸೌಲಭ್ಯದಡಿ ಬಟ್ಟೆ, ಪುಸ್ತಕ ತಲುಪಿಸಿ ಮಕ್ಕಳನ್ನು ಶಾಲೆಗೆ ಕರೆ ತರಲು ಪ್ರಯತ್ನ ಮಾಡುತ್ತೇವೆ.ಮಂಜಣ್ಣ, ಸಮಾಜ ಸೇವಕ