ಜಿಲ್ಲೆ

ಪೆರಿಫೆರಲ್ ವರ್ತಲ ರಸ್ತೆಗೆ ಮತ್ತೆ ಜೀವ

reportermys

ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರಿನ ಅಭಿವೃದ್ಧಿಗೆ ಪೂರಕವಾಗಿರುವ, ಬಹು ನಿರೀಕ್ಷಿತ ಯೋಜನೆಗಳ ಪೈಕಿ ಒಂದಾಗಿರುವ ಬಾಹ್ಯ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ನಿರ್ಮಾಣಕ್ಕೆ ಮತ್ತೆ ಜೀವ ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಈ ರಸ್ತೆ ನಿರ್ಮಾಣ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಶೀಘ್ರದಲ್ಲೇ ಪೆರಿಫೆರಲ್ ರಿಂಗ್ ರೋಡ್‌ನ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಸರ್ವೇ ಕೆಲಸ ಆರಂಭವಾಗಲಿದೆ.

ಈ ಸಂಬಂಧ ಟೆಂಡರ್ ಕರೆಯಲು ಮುಡಾ ಅಧಿಕಾರಿಗಳು ಸಿದ್ಧತೆ ಮಾಡಿದ್ದು, ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಸರ್ವೇ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ. ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಸಂಬಂಧ ಸಾರ್ವಜನಿಕ ವಲಯದಲ್ಲೂ ಯೋಜನೆ ಬಗೆಗಿನ ಸಾಧಕ, ಬಾಧಕಗಳ ಚರ್ಚೆ ಜೋರಾಗಿಯೇ ಇದೆ. ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ಮೈಸೂರಿನ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ.

ಯೋಜನೆಗೆ ಮತ್ತೆ ರೆಕ್ಕೆಪುಕ್ಕ:
ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ 2040ರ ವೇಳೆಗೆ ಜನಸಂಖ್ಯೆ 25ರಿಂದ 30 ಲಕ್ಷಕ್ಕೆ ಏರಬಹುದು ಎಂಬುದನ್ನು ಗುರಿಯಾಗಿರಿಸಿಕೊಂಡು ಮುಡಾ ಈ ಹಿಂದೆಯೇ ನಗರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ 750 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಮುಂದಾಗಿತ್ತು.
ಆದರೆ ಆಗ ಯೋಜನೆ ಸಂಬಂಧ ಸಮೀಕ್ಷೆಯೇ ನಡೆಯದೆ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಇರುವ ವರ್ತುಲ ರಸ್ತೆಯಿಂದ (ರಿಂಗ್ ರೋಡ್) 5 ರಿಂದ 8 ಕಿ.ಮೀ. ದೂರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಸಮೀಕ್ಷೆ ನಡೆಸಿ ಎಷ್ಟು ಭೂಮಿ ಅಗತ್ಯವಿದೆ, ಯಾವ ಗ್ರಾಮಗಳ ಮೇಲೆ ಹಾದು ಹೋಗುತ್ತದೆ, ಪ್ರಸ್ತುತ ಇರುವ ಯಾವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಮುಡಾ 5 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದರೂ ಯೋಜನೆ ಟೇಕ್ಾ ಆಗಿರಲಿಲ್ಲ. ಈಗ ಆ ಯೋಜನೆಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಇತ್ತೀಚೆಗೆ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಸರ್ವೇ ಕಾರ್ಯ ಆರಂಭವಾಗಬೇಕಿದೆ.

ಮುಡಾ ಸಭೆಯಲ್ಲಿ ತೀರ್ಮಾನ:
ಮುಂದಿನ 20 ವರ್ಷಗಳ ನಗರದ ಬೆಳವಣಿಗೆಯನ್ನು ಗಮದಲ್ಲಿಟ್ಟುಕೊಂಡು ಒಟ್ಟು 73.25 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲು 1971 ಕೋಟಿ ರೂ. ಅಂದಾಜು ಮೊತ್ತದ ಯೋಜನೆ ರೂಪಿಸಲಾಗಿದೆ. ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣದ ವಿಸ್ತೃತ ಯೋಜನಾ ವರದಿಯನ್ನು ಭಾರತ್ ಮಾಲಾ ೇಸ್-2 ಯೋಜನೆಯಲ್ಲಿ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಡಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಕುರಿತು ಗಮನ ಸೆಳೆಯಲಾಯಿತು. ರಸ್ತೆ ನಿರ್ಮಾಣಕ್ಕೆ ಒಟ್ಟು ಅಂದಾಜು 800 ಎಕರೆ ಜಾಗದ ಅವಶ್ಯಕತೆ ಇದೆ. 2016ರ ಸಿಡಿಪಿಯಲ್ಲಿಯೇ ಪೆರಿಫೆರಲ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.50 ಅನುದಾನ ನೀಡಲಿದೆ.

ಪೆರಿಫೆರಲ್ ರಿಂಗ್ ರಸ್ತೆಯಿಂದ ಏನೆಲ್ಲ ಉಪಯೋಗ?:
ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಿದರೆ ದೊಡ್ಡ ವಾಹನಗಳೂ ಸೇರಿದಂತೆ ಎಲ್ಲ ಬಗೆಯ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲವಾಗುತ್ತದೆಯಲ್ಲದೆ, ಹೊಸ ಬಡಾವಣೆಗಳು, ಗ್ರಾಮಗಳಿಗೂ ಸಂಪರ್ಕ ಸೌಲಭ್ಯ ಸಿಗುವುದರಿಂದ ಮುಂದೆ ಮೈಸೂರು ನಗರದಲ್ಲಿ ಸಂಚಾರ ಒತ್ತಡ ತಪ್ಪಿಸಬಹುದಾಗಿದೆ. ರಾಜ್ಯವಷ್ಟೇ ಅಲ್ಲದೆ, ದೇಶ-ವಿದೇಶಗಳಿಂದ ಮೈಸೂರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವುದು ಒಂದೆಡೆಯಾದರೆ, ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಕೈಗಾರಿಕಾ ಪ್ರದೇಶಗಳು ಸ್ಥಾಪನೆಗೊಂಡಿರುವ ಕಾರಣ ಹಾಗೂ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಆರಂಭಗೊಂಡಿರುವುದು ನಗರದಲ್ಲಿ ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ಅಧಿಕವಾಗಲು ಪ್ರಮುಖ ಕಾರಣವಾಗಿದೆ. ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ಈ ಎಲ್ಲ ಸಮಸ್ಯೆಗೆ ಉತ್ತರ ಸಿಗಲಿದೆ. ಸದ್ಯ ನಗರದಲ್ಲಿನ 44 ಕಿ.ಮೀ ಉದ್ದದ ರಿಂಗ್ ರಸ್ತೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ನಗರದ ಟ್ರಾಫಿಕ್ ಒತ್ತಡಕ್ಕೆ ಮುಕ್ತಿ ಸಿಗಲಿದೆ.

ಮೈಸೂರಿನ ಅಭಿವೃದ್ಧಿಗೆ ಪೂರಕವಾಗಿ ಬಾಹ್ಯ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ನಿರ್ಮಾಣ ಮಾಡಲಾಗುತ್ತದೆ. ಪ್ರಸ್ತುತ ಇರುವ ವರ್ತುಲ ರಸ್ತೆಯಿಂದ (ರಿಂಗ್ ರೋಡ್) 5 ರಿಂದ 8 ಕಿ.ಮೀ. ದೂರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಸಮೀಕ್ಷೆ ನಡೆಸಿ ಎಷ್ಟು ಭೂಮಿ ಅಗತ್ಯವಿದೆ. ಯಾವ ಗ್ರಾಮಗಳ ಮೇಲೆ ಹಾದು ಹೋಗುತ್ತದೆ, ಪ್ರಸ್ತುತ ಇರುವ ಯಾವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಶೀಘ್ರ ಸರ್ವೇ ಕಾರ್ಯ ಆರಂಭಿಸಲಾಗುವುದು.ದಿನೇಶ್ ಕುಮಾರ್, ಮುಡಾ ಆಯುಕ್ತ