ವಿಜಯಪುರ: ದೀಪಾವಳಿ ಹಬ್ಬದ ನಿಮಿತ್ತ ನಗರದ ಕೆಲವು ಕಡೆ ತಾತ್ಕಾಲಿಕ ಹಾಗೂ ಖಾಯಂ ವ್ಯಾಪಾರಸ್ಥರು ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಪಟಾಕಿ ಮಾರಾಟಗಾರರು ಸೋಮವಾರದೊಳಗೆ ಜಿಲ್ಲಾಡಳಿತಕ್ಕೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಪರವಾನಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಜಿಲ್ಲೆಯ ವಿವಿಧ ಪಟಾಕಿ ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ಗಳು ಜಂಟಿ ಸಮೀಕ್ಷಾ ನಡೆದ ಪರವಾನಗಿಗೆ ಶಿಫಾರಸು ಮಾಡಬೇಕು. ವ್ಯಾಪಾರಸ್ಥರು ಪಟಾಕಿಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆ ಹಾಕಲು ಪ್ರತ್ಯೇಕ ಜಾಗ ಗುರುತಿಸಬೇಕು. ಎಲ್ಲ ವ್ಯಾಪಾರಸ್ಥರು ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಂಡಿದ್ದನ್ನು ಖಾತ್ರಿಪಡಿಸಿ ನಂತರ ಪರವಾನಗಿಗೆ ಶಿಫಾರಸ್ಸು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ನಾಳೆಯೇ ಎಲ್ಲ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಿ ಪಟಾಕಿ ವ್ಯಾಪಾರಸ್ಥರ ಸಭೆ ನಡೆಸಿ ಬೆಂಕಿ-ಅವಘಡಗಳು ಸಂಭವಿಸದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಅಗತ್ಯ ಸೂಚನೆಗಳನ್ನು ನೀಡುವಂತೆ ಅವರು ಸೂಚನೆ ನೀಡಿದರು.
ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಪರವಾನಗಿ ನೀಡಲಾಗುವುದು. ಅಂಗಡಿಗಳಲ್ಲಿ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಪಟಾಕಿಗಳ ಸಂಗ್ರಹಣೆ ಮಾಡಕೂಡದು. ಬೆಂಕಿ ಅವಘಡ ಸಂಭವಿಸದಂತೆ, ಮರಳು, ನೀರು, ಅಗ್ನಿ ನಿರೋಧಕ ಮುಂಜಾಗೃತ ಕ್ರಮಗಳನ್ನು ಅಳವಡಿಸಿಕೊಂಡಿರುವ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಬಳಿಕ ತಹಸೀಲ್ದಾರರು ಪರವಾನಗಿಗೆ ಶಿಫಾರಸ್ಸು ಮಾಡಬೇಕು ಎಂದು ಹೇಳಿದರು.
ಗ್ರಾಪಂ, ಪಪಂ ಮತ್ತು ನಗರ ಪ್ರದೇಶಗಳಲ್ಲಿ ಪಟಾಕಿ ಅಂಗಡಿಗಳಿಗೆ ಗುರುತಿಸಿದ ಪ್ರದೇಶಗಳಲ್ಲಿ ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರುವಂತೆ ನೋಡಿಕೊಳ್ಳಬೇಕು. ಸಂತೆ, ಶಾಲೆ, ಹೆಚ್ಚು ಜನಸಂದಣಿಗಳಿರುವ ಪ್ರದೇಶಗಳಲ್ಲಿ ಪಟಾಕಿ ಅಂಗಡಿ ಹಾಕದಂತೆ ನೋಡಿಕೊಳ್ಳಬೇಕು. ಹಬ್ಬದ ಹಿನ್ನೆಲೆ ಸರ್ಕಾರ ಹೊರಡಿಸಿದ ಮಾರ್ಗಸೂಚಿಯ ಪ್ರಕಾರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಮತ್ತಿತರರಿದ್ದರು.