ಕುಷ್ಟಗಿ: ತಾಲೂಕಿನ ದೋಟಿಹಾಳ, ಕೇಸೂರು ಗ್ರಾಮ ಹಾಗೂ ಸುತ್ತಮುತ್ತ ಭಾನುವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆಯಾಗಿದೆ. ಸುಮಾರು ಎರಡು ತಾಸು ಸುರಿದ ಮಳೆಗೆ ಇಳೆ ತಂಪಾಗಿ ವರ್ಷದ ಆರಂಭದಲ್ಲಿ ಸುರಿದ ಮೊದಲ ಮಳೆಯ ದೃಶ್ಯವನ್ನು ಗ್ರಾಮಸ್ಥರು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇತ್ತೀಚೆಗೆ ತಾಲೂಕಿನ ಹನುಮಸಾಗರ ಸುತ್ತಮುತ್ತ ಮಳೆಯಾಗಿತ್ತು. ಮಳೆ ಶುರುವಾಗುತ್ತಿದ್ದಂತೆಯೇ ಮಕ್ಕಳು ಮಳೆಯ ನೀರಿನ ಜತೆ ಆಟವಾಡುತ್ತ ಖುಷಿಪಟ್ಟರೆ, ಬಹುತೇಕರು ಮಳೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಪ್ರಖರ ಬಿಸಿಲಿನ ತಾಪದ ಕಾರಣದಿಂದಲೇ ಮಳೆಗಾಲಕ್ಕೂ ಮುನ್ನವೇ ಮಳೆಯಾಗುತ್ತಿದೆ ಎಂದು ಕೆಲವರು ಹೇಳಿದರೆ, ಕಳೆದ ವರ್ಷದಲ್ಲಿ ಬಾಕಿ ಇದ್ದ ಮಳೆ ಈಗ ಸುರಿಯುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ.