ಜಿಲ್ಲೆ

ಜನರ ಭವಿಷ್ಯಕ್ಕೆ ಎಲ್‌ಐಸಿ ಬೆಂಬಲ

Davangere - Desk - Mahesh Babu E

ಚಳ್ಳಕೆರೆ: ಸಾರ್ವಜನಿಕವಾಗಿ ಜೀವವಿಮಾ ಸೌಲಭ್ಯ ಯೋಜನೆ ನೀಡುವಲ್ಲಿ ಭಾರತೀಯ ಜೀವವಿಮಾ ಸಂಸ್ಥೆ ಜನರ ವಿಶ್ವಾಸ ಉಳಿಸಿಕೊಂಡಿದೆ ಎಂದು ಶಾಖಾ ವ್ಯವಸ್ಥಾಪಕ ಕೆ.ಪಿ.ಚನ್ನಪ್ಪ ಹೇಳಿದರು.

ನಗರದ ಭಾರತೀಯ ಜೀವ ವಿಮಾ ಶಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಸ್ಥೆಯ 67ನೇ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರ ಭವಿಷ್ಯಕ್ಕೆ ಅನುಕೂಲ ಕಲ್ಪಿಸುವಲ್ಲಿ ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದರು.

ದೇಶದ ಸಂಸ್ಥೆಯ ಸೇವಾ ಕಾರ್ಯದಲ್ಲಿ ವಿಭಾಗೀಯವಾಗಿ ಶಿವಮೊಗ್ಗ 2ನೇ ಸ್ಥಾನ ಪಡೆದುಕೊಂಡಿದೆ. ಶಿವಮೊಗ್ಗ ವಲಯದ 21 ಶಾಖೆಗಳಲ್ಲಿ ಚಳ್ಳಕೆರೆ ಶಾಖೆ 2ನೇ ಸ್ಥಾನದಲ್ಲಿದೆ. ದೇಶದಲ್ಲಿ 39 ಕೋಟಿ ಪಾಲಿಸಿದಾರರು, 13 ಲಕ್ಷ ಪ್ರತಿನಿಧಿಗಳು ಸೇರಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಸಂಸ್ಥೆಯ ಪ್ರಗತಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಬಡ ಕುಟುಂಬಗಳಿಗೆ ನೇರವಾಗಿ ಸಾಮಾಜಿಕ ವಿಮಾ ಭದ್ರತೆ ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ. ಅತಿ ಹೆಚ್ಚು ಪಾಲಿಸಿ ಪಡೆದ ಗ್ರಾಮಗಳನ್ನು ವಿಮಾ ಗ್ರಾಮಗಳಾಗಿ ಗುರುತಿಸಲಾಗುತ್ತದೆ. ಗ್ರಾಮೀಣ ಭಾಗದ ವಿಮಾ ಸೇವಾ ಸೇರಿ ರೈತರಿಗೆ ಸಾಲ ಯೋಜನೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾರ್ವಜನಿಕ ವಲಯ ಕಟ್ಟಡಗಳ ನಿರ್ಮಾಣ ಸೇವೆ ಮಾಡಲಾಗುತ್ತದೆ ಎಂದು ಹೇಳಿದರು.

ಶಾಖೆಯ ಉಪಶಾಖಾಧಿಕಾರಿ ಬಿ.ಗಜೇಂದ್ರ ಬೆಳಕೆರೆ, ಅಭಿವೃದ್ಧಿ ಅಧಿಕಾರಿಗಳಾದ ಬಿ.ತಿಪ್ಪೇಸ್ವಾಮಿ, ಟಿ.ರಾಜು, ವಲಯ ಅರಣ್ಯ ಅಧಿಕಾರಿ ಡಿ.ಬಹುಗುಣ, ರಾಜೇಶ್, ಶ್ರೀನಾಥ್, ಹನುಮಂತಪ್ಪ, ಜಗದೀಶ್, ನವ್ಯಶ್ರೀ, ಗೀತಾಂಜಲಿ, ಚಿದಾನಂದಸ್ವಾಮಿ, ಗಂಗಾಧರ ಇತರರಿದ್ದರು.