ಜಿಲ್ಲೆ

ಬಹುಮುಖ ಪ್ರಗತಿಗೆ ಗ್ರಂಥಾಲಯ ಪೂರಕ

ವೀರೇಶ ಸೌದ್ರಿ

ಮುಂಡರಗಿ: ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಬಹುಮುಖ ಪ್ರಗತಿಗೆ ಗ್ರಂಥಾಲಯ ದಾರಿ ಮಾಡಿಕೊಡುತ್ತದೆ ಎಂದು ತಾಪಂ ಸಹಾಯಕ ನಿರ್ದೇಶಕ ಪ್ರವೀಣ ಗೋಣೆಮ್ಮನವರ ಹೇಳಿದರು.

ತಾಲೂಕಿನ ಕೊರ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮಕ್ತುಂಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೆಚ್ಚೆಚ್ಚು ರೂಢಿಸಿಕೊಳ್ಳಬೇಕು ಎಂದರು.

ಪಿಡಿಒ ಮಹೇಶ ಅಲ್ಲಿಪೂರ ಮಾತನಾಡಿ, ಯುವ ಪೀಳಿಗೆ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಪುಸ್ತಕಗಳು ಸಹಕಾರಿಯಾಗುತ್ತವೆ. ಪುಸ್ತಕಗಳು ಜ್ಞಾನ ನೀಡುವ ಅಮೂಲ್ಯ ಸಂಪತ್ತು ಎಂದರು. ಕೊರ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಹನುಮವ್ವ ಸಾಬಣ್ಣವರ ಅವರು ಗ್ರಂಥಾಲಯವನ್ನು ಉದ್ಘಾಟಿಸಿದರು.

ಗ್ರಾಪಂ ಸದಸ್ಯರಾದ ಅಂದಪ್ಪ ತಿಪ್ಪಣ್ಣವರ, ಲಲಿತಾ ಹೊಸಮನಿ, ಕಾರ್ಯದರ್ಶಿ ಹನುಮಂತ, ಎಸ್‌ಡಿಎಂಸಿ ಪದಾಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.