ಜಿಲ್ಲೆ

ಸಾರ್ವಜನಿಕರಿಗೆ ಗ್ರಂಥಾಲಯ ಮುಕ್ತ, ಡಿಜಿಟಲ್ ಲೈಬ್ರರಿಯಿಂದ ಓದುಗನಿಗೆ ಮನೆಯಲ್ಲೇ ಪುಸ್ತಕ

Kolar

ಕೋಲಾರ: ಲಾಕ್‌ಡೌನ್ ಸಡಿಲಿಕೆ ನಂತರ ಸಾರ್ವಜನಿಕ ಗ್ರಂಥಾಲಯಗಳ ಬಾಗಿಲು ತೆರೆದಿರುವುದರಿಂದ ಓದುಗರು ಗ್ರಂಥಾಲಯದ ಕಡೆ ಹೆಜ್ಜೆ ಇಡಲಾರಂಭಿಸಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯೂ ಡಿಜಿಟಲ್ ಗ್ರಂಥಾಲಯಕ್ಕೆ ತೆರೆದುಕೊಂಡಿದೆ.

ರಾಜ್ಯದ 30 ಜಿಲ್ಲೆ, 26 ನಗರ, 216 ತಾಲೂಕು ಅಲೆಮಾರಿ, ಕೊಳಚೆ ಪ್ರದೇಶ, ಸಮುದಾಯ ಮಕ್ಕಳ ಕೇಂದ್ರ, ಗ್ರಾಪಂ ಸಹಿತ ಒಟ್ಟು 7000 ಗ್ರಂಥಾಲಯಗಳಿವೆ. 272 ಡಿಜಿಟಲ್ ಗ್ರಂಥಾಲಯವಾಗಿವೆ. 1.10 ಲಕ್ಷಕ್ಕೂ ಅಧಿಕ ಪುಸ್ತಕಗಳು ಲಭ್ಯವಿದೆ. 50ಕ್ಕೂ ಸಾಹಿತಿಗಳ ಸಾಫ್ಟ್ ಕೃತಿಗಳನ್ನು ಅಳವಡಿಸಲಾಗಿದೆ. ಬೆರಳ ತುದಿಯಲ್ಲಿ ತಮ್ಮಿಷ್ಟದ ಪುಸ್ತಕ ಓದಬಹುದು. ಯುಜಿ, ಪಿಜಿ, ಎನ್‌ಸಿಇಆರ್‌ಟಿ, ಸಿಬಿಎಸ್‌ಇ, ಐಸಿಎಸ್ ಪುಸ್ತಕಗಳೂ ಲಭ್ಯವಿದೆ. ಈಗಾಗಲೇ ಓದುಗರ ಸಂಖ್ಯೆ 4 ಲಕ್ಷ ದಾಟಿದ್ದು, ಲಾಕ್‌ಡೌನ್ ವೇಳೆ ಡಿಜಿಟಲ್ ಗ್ರಂಥಾಲಯಗಳು ಅಕ್ಷರ ಪ್ರೇಮಿಗಳ ನೆರವಿಗೆ ಬಂದಿವೆ.

ನೋಂದಣಿ ಹೇಗೆ: ಓದುಗರು ಡಿಜಿಟಲ್ ಲೈಬ್ರರಿಯ ಪ್ರಯೋಜನ ಪಡೆಯಲು ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್ ಅನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು. ಜ್ಞಾನದೀಪಿಕೆ ಎಂಬ ಡಿಜಿಟಲ್ ಗ್ರಂಥಾಲಯದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಿ ಪುಸ್ತಕ ಓದಬಹುದು.

ತೆರೆದ ಗ್ರಂಥಾಲಯ: ಕೇಂದ್ರ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಸಾರ್ವಜನಿಕ ಗ್ರಂಥಾಲಯ ತೆರೆಯಲು ಅನುಮತಿ ನೀಡಿದ್ದರಿಂದ ಜಿಲ್ಲಾ ಕೇಂದ್ರದ ಡಿವಿಜಿ ಗ್ರಂಥಾಲಯ ಸೆ.12ರಿಂದ ಓದುಗರಿಗೆ ಮುಕ್ತವಾಗಿದೆ. ಸ್ಪರ್ಧಾತ್ಮಕ ಅಧ್ಯಯನ ಕೇಂದ್ರವೂ ಜ್ಞಾನದಾಹ ತಣಿಸಲು ಸಿದ್ಧವಾಗಿದೆ. ಆದರೆ ಕರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಗ್ರಂಥಾಲಯಕ್ಕೆ ಬರುತ್ತಿರುವವರ ಸಂಖ್ಯೆ ನಿತ್ಯ 50ರಿಂದ 75ರಷ್ಟಿದೆ. ಹಾಗಾಗಿ ಇಲಾಖೆ ಅಧಿಕಾರಿಗಳು ಡಿಜಿಟಲ್ ಗ್ರಂಥಾಲಯದ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಲಾರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಗ್ರಂಥಾಲಯ: ಜಿಲ್ಲೆಯಲ್ಲಿ ಒಟ್ಟು 182 ಗ್ರಂಥಾಲಯಗಳಿದ್ದು, 6,78332 ಕನ್ನಡ ಪುಸ್ತಕ,40,635 ಹಿಂದಿ, 63,932 ಇಂಗ್ಲಿಷ್, ಇತರ 50,665 ಸೇರಿ ಒಟ್ಟು 8,33,554 ಪುಸ್ತಕಗಳಿವೆ. ಒಟ್ಟು ಸದಸ್ಯರ ಸಂಖ್ಯೆ 40,609. ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಡಿಜಿಟಲ್ ಗ್ರಂಥಾಲಯದಲ್ಲಿ ಒಟ್ಟು 38,024 ಇ- ಪುಸ್ತಕಗಳು, 59,990 ಇ-ನಿಯತಕಾಲಿಕೆಗಳು, 5829 ವೀಡಿಯೋಗಳು ಲಭ್ಯವಿದೆ.

ಸಾರ್ವಜನಿಕರು ಕರೊನಾ ಮಾರ್ಗಸೂಚಿ ಪಾಲಿಸಿ ಗ್ರಂಥಾಲಯಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ. ಓದುಗರು ಡಿಜಿಟಲ್ ಗ್ರಂಥಾಲಯದ ಸೌಲಭ್ಯ ಬಳಸಿಕೊಂಡು ಮನೆಯಲ್ಲೇ ತಮಗೆ ಬೇಕಿರುವ ಪುಸ್ತಕ ಓದುವ ಅವಕಾಶವಿದೆ. ಈ ಬಗ್ಗೆ ಇಲಾಖೆಯಿಂದ ಜನರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಸಲಾಗುತ್ತದೆ. ದಿವಾಕರ್, ಜಿಲ್ಲಾ ಗ್ರಂಥಾಲಯ ಅಧಿಕಾರಿ, ಕೋಲಾರ ಲಾಕ್‌ಡೌನ್ ಅವಧಿಯಲ್ಲಿ ಗ್ರಂಥಾಲಯವನ್ನು ಮಿಸ್ ಮಾಡ್ಕೊಂಡಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ ಕೇಂದ್ರದಲ್ಲಿ ಅವಶ್ಯ ಪುಸ್ತಕಗಳು ಲಭ್ಯವಿರುವುದರಿಂದ ಲಾಕ್‌ಡೌನ್ ತೆರವಿನ ನಂತರ ಗ್ರಂಥಾಲಯಕ್ಕೆ ತೆರಳಿ ಅಧ್ಯಯನ ಮಾಡುತ್ತಿದ್ದೇನೆ. ಪುರಹಳ್ಳಿ ಚಂದ್ರಶೇಖರ್, ವೇಮಗಲ್