ಜಿಲ್ಲೆ

ದೆಹಲಿಯಲ್ಲಿ ಮೈಸೂರಿನ ‘ಕಲಿಸು’ ಫೌಂಡೇಷನ್‌ನಿಂದ ಗ್ರಂಥಾಲಯ ಪ್ರಾರಂಭ

ಮೈಸೂರು: ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನ್ನುವುದು ಪ್ರತೀತಿ. ಅದಕ್ಕಾಗಿ ಮೈಸೂರು ಸಂಸ್ಥಾನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿತು ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನವದೆಹಲಿಯಲ್ಲಿ ಮೈಸೂರಿನ ಕಲಿಸು ಫೌಂಡೇಷನ್ ಪ್ರಾರಂಭಿಸಿರುವ ಗ್ರಂಥಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಮೈಸೂರು ಮಹಾರಾಜರು ಶಿಕ್ಷಣಕ್ಕೆ ಒತ್ತು ನೀಡಿದ ಪರಿಣಾಮ ಮೈಸೂರು ವಿಶ್ವದ ಪ್ರಮುಖ ವಿದ್ಯಾನಗರಿಗಳಲ್ಲಿ ಒಂದಾಗಿ ರೂಪುಗೊಂ ಡಿದೆ. ಇದಕ್ಕೆ ಪೂರಕವಾಗಿ ಮೈಸೂರಿನ ಕಲಿಸು ಫೌಂಡೇಷನ್ ಮಕ್ಕಳ ಹಾಗೂ ಯುವ ಸಮೂಹದ ಜ್ಞಾನಾರ್ಜನೆಗೋಸ್ಕರ ಗ್ರಂಥಾಲಯಗಳನ್ನು ತೆರೆಯುತ್ತಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಿಸು ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಜ್ಞಾನ ಹರಡುವ ಯಜ್ಞದಲ್ಲಿ ತೊಡಗಿದೆ. ಈ ಮಹತ್ಕಾರ್ಯದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಈ ಸಂಸ್ಥೆಯ ರಾಯಭಾರಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲಾಗುತ್ತಿದೆ. ನಿಜಕ್ಕೂ ಇದೊಂದು ಪುಣ್ಯದ ಕೆಲಸ ಎಂದರು.

ಮೈಸೂರಿನ ಕಲಿಸು ಫೌಂಡೇಷನ್ ತನ್ನ ವ್ಯಾಪ್ತಿ ವಿಸ್ತರಿಸಿ ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಲೈಬ್ರರಿ ಆರಂಭಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸಂಸ್ಥೆಯ ಸಂಸ್ಥಾಪಕ ನಿಖಿಲೇಶ್ ಕಾರ್ಯ ಮೆಚ್ಚುವಂತದ್ದು. ನವದೆಹಲಿಯ ಗೋಲ್ ಮಾರುಕಟ್ಟೆಯ ಅಟಲ್ ಆದರ್ಶ್ ಬೆಂಗಾಲಿ ಬಾಲಿಕಾ ವಿದ್ಯಾಲಯದಲ್ಲಿ ತೆರೆದಿರುವ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ದೊರೆಯಲಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸತ್ಪ್ರಜೆಗಳಾಗಿ ದೇಶಕ್ಕೆ, ನಾಡಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ಮಾತನಾಡಿ, ಮಕ್ಕಳಿಗಾಗಿ ಗ್ರಂಥಾಲಯ ಆರಂಭಿಸಿರುವ ಮೈಸೂರು ಮೂಲದ ಕಲಿಸು ಸಂಸ್ಥೆಗೆ ನನ್ನ ಶುಭ ಹಾರೈಕೆಗಳು. ಈ ಸಂಸ್ಥೆಯ ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದೆ. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಾವು ಕಲಿಸು ಸಂಸ್ಥೆ ಒಟ್ಟಾಗಿ ಕೈ ಜೋಡಿಸಲು ಉತ್ಸುಕರಾಗಿದ್ದೇವೆ. ಮತ್ತು ಶೀಘ್ರದಲ್ಲೇ ಕಲಿಸು ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗುತ್ತೇವೆ ಎಂದು ತಿಳಿಸಿದರು.

ಕಲಿಸು ಫೌಂಡೇಷನ್ ಸಂಸ್ಥಾಪಕ ನಿಖಿಲೇಶ್ ಮಾತನಾಡಿ, ನಾವು ಈಗಾಗಲೇ 124 ಗ್ರಂಥಾಲಯಗಳನ್ನು ಆರಂಭಿಸಿದ್ದೇವೆ. ದೆಹಲಿಯಲ್ಲಿ 125ನೇ ಗ್ರಂಥಾಲಯ ತೆರೆದಿದ್ದೇವೆ. ರಾಜ ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಪುಸ್ತಕಗಳು ದೊರೆಯಬೇಕು ಎಂಬ ಉದ್ದೇಶದಿಂದ ಕಲಿಸು ಫೌಂಡೇಷನ್ ಆರಂಭಿಸಲಾಯಿತು. ನವದೆಹಲಿಯ ಗ್ರಂಥಾಲಯಕ್ಕೆ 1500 ಪುಸ್ತಕಗಳನ್ನು ಒದಗಿಸಲಾ ಗಿದೆ. ಇದರಿಂದ 1400 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.