ಜಿಲ್ಲೆ

ಕೀಲಾರದಲ್ಲಿ ಗ್ರಂಥಾಲಯ ಕಟ್ಟಡ ಲೋಕಾರ್ಪಣೆ: ರೋಟರಿ, ದಾನಿಗಳ ನೆರವಿನಿಂದ ನಿರ್ಮಾಣ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ರೋಟರಿ ಕ್ಲಬ್ ವಿಜಯನಗರ ಬೆಂಗಳೂರು ಮತ್ತು ದಾನಿಗಳಾದ ಅರುಣ್ ಮುದ್ದೇಗೌಡ ಹಾಗೂ ಕಿರಣ್‌ಕುಮಾರ್ ನೆರವಿನೊಂದಿಗೆ ನಿರ್ಮಾಣ ಮಾಡಿರುವ ಗ್ರಂಥಾಲಯ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು.

ದಾನಿ ಅರುಣ್ ಮುದ್ದೇಗೌಡ ಮಾತನಾಡಿ, ಒಂದರಿಂದ ಏಳನೇ ತರಗತಿವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಈಗ ನಮ್ಮ ಶಾಲೆಯನ್ನು ಅಭಿವೃದ್ಧಿ ಮಾಡಲು ನನಗೆ ಅಭಿಮಾನವಿದೆ. ಗ್ರಾಮಸ್ಥರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ. ಶಾಲೆಯ ಉಳಿವಿಗೆ ಹಾಗೂ ಅದರ ಅಭಿವೃದ್ಧಿಗೆ ಶಾಲೆಯಲ್ಲಿ ಓದಿದವರೆಲ್ಲರೂ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ರಮೇಶ್ ಮಾತನಾಡಿ, ನಮ್ಮ ಶಾಲೆಯಲ್ಲಿ ಗ್ರಂಥಾಲಯ ಮಾಡಬೇಕೆಂದು ಕೇಳಿಕೊಂಡಾಗ ಅರುಣ್ ಮುದ್ದೇಗೌಡ ಸ್ಪಂದಿಸಿದರು. ಆಟದ ಮೈದಾನದ ಅಭಿವೃದ್ಧಿ ಮತ್ತು ಕೊಠಡಿ ಕಟ್ಟಿಸಿಕೊಡುವುದು ಸೇರಿದಂತೆ ಹಲವು ಸೌಲಭ್ಯವನ್ನು ನೀಡಿದ್ದಾರೆ. ಜತೆಗೆ ರೋಟರಿಯವರಿಗೆ ಧನ್ಯವಾದವನ್ನು ತಿಳಿಸುತ್ತೇನೆ ಎಂದರು.

ನಿವೃತ್ತ ಶಿಕ್ಷಕ ಕೆ.ಪಿ.ವೀರಪ್ಪ ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿದ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ರಾಜ್ಯಕ್ಕೇ ಜ್ಞಾನ ಜ್ಯೋತಿಯನ್ನು ಬೆಳೆಗಿಸಿದರು. ಅವರ ಹಾದಿಯಲ್ಲಿಯೇ ಸಾಗುವ ಮನೋಭಾವ ಇಟ್ಟುಕೊಂಡಿರುವ ಅರುಣ್ ಮುದ್ದೇಗೌಡ ಸೇರಿದಂತೆ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷ ಶಿವಶಂಕರ್, ದಾನಿ ಕಿರಣ್ ಹೊನ್ನಾಯಕನಹಳ್ಳಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಭವ್ಯಾ, ಸದಸ್ಯರಾದ ಚಂದ್ರಶೇಖರ್, ಶಿವರಾಂ, ವೀರೇಶ್, ಮುಖ್ಯಶಿಕ್ಷಕ ಸುಂದರ್‌ರಾಜ್, ಬಿಆರ್‌ಸಿ ಅಂಜುಂ, ಉಮಾ, ಮಹೇಂದ್ರ, ಕುಮಾರಸ್ವಾಮಿ ಭಾಗವಹಿಸಿದ್ದರು.