ಚಿಕ್ಕಮಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಶನಿವಾರ ನೂತನ ಗ್ರಂಥಾಲಯ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು. ಎಚ್.ಡಿ.ತಮ್ಮಯ್ಯ, ಸಿ.ಟಿ.ರವಿ, ಸುಜಾತಾ ಶಿವಕುಮಾರ್, ಜಿ.ಉಮೇಶ್, ಬಿ.ಎಚ್.ಹರೀಶ್, ದಲ್ಜಿತ್ ಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ಗ್ರಂಥಾಲಯಗಳು ಉತ್ತಮ ಜ್ಞಾನ ಭಂಡಾರ

ಚಿಕ್ಕಮಗಳೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳಿಗೆ ತಲುಪಬೇಕಾದರೆ ಗ್ರಂಥಾಲಯ ಎಂಬ ಜ್ಞಾನ ಭಂಡಾರವನ್ನು ಪ್ರವೇಶಿಸಿ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪಡೆದು ಅಧ್ಯಯನ ಮಾಡಬೇಕು. ಗ್ರಂಥಾಲಯದಲ್ಲಿ ಜ್ಞಾನಾರ್ಜನೆಯ ಜೊತೆಗೆ ಮನರಂಜನೆ ಪಡೆಯಲು ಅಗತ್ಯವಾದ ಕಥೆ, ಕಾದಂಬರಿ, ನಾಟಕ, ಕಾವ್ಯ, ಇತ್ಯಾದಿಗೆ ಸಂಬAಧಿಸಿದ ಪುಸ್ತಕಗಳನ್ನು ಓದಿ ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದರು.

ನಗರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಶನಿವಾರ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜ್ಞಾನವನ್ನು ಸಂಪಾದಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ. ಬಡ ವರ್ಗದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಪುಸ್ತಕಗಳನ್ನು ಖರೀದಿಸಿ ಓದಲು ಸಾಧ್ಯವಾಗುವುದಿಲ್ಲ. ಆ ಕಾರಣದಿಂದಾಗಿ ಅವರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ದೃಷ್ಟಿಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಗ್ರಂಥಾಲಯದಿAದ ದೊರಕುವ ಪುಸ್ತಕಗಳು ಅವರ ಅಭ್ಯಾಸಕ್ಕೆ ಅನುಕೂಲವಾಗುತ್ತವೆ. ಇಂದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸರ್ಕಾರ ವಿದ್ಯಾರ್ಥಿಗಳ ಹಾಗೂ ಹಿರಿಯ ನಾಗರೀಕರ ಅನುಕೂಲಕ್ಕಾಗಿ ಗ್ರಂಥಾಲಯಗಳನ್ನು ತೆರೆದಿದೆ. ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಮಕ್ಕಳು ಪಡೆದುಕೊಳ್ಳಬೇಕು. ತಮ್ಮ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುವುದರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಕರಿಯಾಗಲಿದೆ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನಗರಸಭೆಯಿಂದ ಉಳಿಸಿದ ಸೆಸ್ ಅನುದಾನದಲ್ಲಿ ಈ ನಗರ ಕೇಂದ್ರ ಗ್ರಂಥಾಲಯದ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಪುಸ್ತಕಗಳು ಯಾವಾಗಲೂ ನಮ್ಮ ಅತ್ಯುತ್ತಮ ಸ್ನೇಹಿತನಿದ್ದಂತೆ. ಪುಸ್ತಕವನ್ನು ತಲೆಬಾಗಿ ಓದಿದರೆ ನಮ್ಮನ್ನು ತಲೆಯೆತ್ತಿ ನಿಲ್ಲುವಂತೆ ಮಾಡುತ್ತವೆ. ಅಂಥ ಸ್ನೇಹಿತನನ್ನು ಯಾವಾಗಲೂ ಜೊತೆಯಲ್ಲಿ ಇರಿಸಿಕೊಂಡು ಅದರ ಜ್ಞಾನ ಭಂಡಾರವನ್ನು ಹೃದಯದಾಳಕ್ಕೆ ಇಳಿಸಿಕೊಳ್ಳಬೇಕು. ಕಲಿಕೆ ಮತ್ತು ವಿಚಾರ ವಿನಿಮಯ ಮಾಡುವಂತಹ ಕೇಂದ್ರ ಗ್ರಂಥಾಲಯವಾಗಿದೆ. ಯಾರು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳುತ್ತಾರೋ ಅವರು ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸುತ್ತಾರೆ. ಅವರೇ ಸ್ವತಃ ಜ್ಞಾನ ಭಂಡಾರವಾಗಿ ಬಿಡುತ್ತಾರೆ ಎಂದರು.
ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಮಾತನಾಡಿ, ಗ್ರಂಥಾಲಯಗಳು ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತವೆ. ಇಂದಿನ ಆಧುನಿಕ ಯುಗದಲ್ಲಿ ವಿದ್ಯೆ ಒಂದು ಅಸ್ತçವಿದ್ದಂತೆ. ಯಾರು ವಿದ್ಯೆಯನ್ನು ಬಲ್ಲವನಾಗಿರುತ್ತಾರೋ, ಯಾರು ಜ್ಞಾನವನ್ನು ಹೊಂದಿರುತ್ತಾರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ನಮ್ಮ ಜ್ಞಾನವೇ ನಮಗೆ ಶಕ್ತಿ. ನಾವು ಸಂಪಾದಿಸಿದ ಸಂಪತ್ತು ಯಾವಾಗ ಬೇಕಾದರೂ ಖಾಲಿಯಾಗಬಹುದು. ಆದರೆ ನಾವು ಸಂಪಾದಿಸಿದ ವಿದ್ಯೆ ಎಂದೂ ಖಾಲಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಜಗತ್ತಿನ ಎಲ್ಲ ವಿಷಯಗಳ ಕುರಿತು ಜ್ಞಾನವಿರಬೇಕು. ನಾವು ಪ್ರತಿದಿನ ಪತ್ರಿಕೆಗಳನ್ನು ಓದುತ್ತೇವೆ. ಅವುಗಳಲ್ಲಿ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತೇವೆ. ಅದರ ಜೊತೆಗೆ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದಿದಾಗ ಮಾತ್ರ ಪೂರ್ಣ ಜ್ಞಾನವನ್ನು ಪಡೆಯುವಲ್ಲಿ ಸಫಲರಾಗುತ್ತೇವೆ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಗ್ರಂಥಾಲಯಗಳು ಜ್ಞಾನ ಭಂಡಾರವಿದ್ದAತೆ. ನಮಗೆ ಏನೇ ಮಾಹಿತಿ ಬೇಕು, ಏನನ್ನಾದರೂ ಸಂಶೋಧನೆ ಮಾಡಬೇಕು ಎಂದರೆ ಗ್ರಂಥಾಲಯದ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹಾಗೆಯೇ ಪುಸ್ತಕಗಳ ಸಹಾಯವಿಲ್ಲದೆ ಒಬ್ಬ ವ್ಯಕ್ತಿ ಜ್ಞಾನಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಹುದ್ದೆಗಳಿಗೆ ಸೇರಬೇಕಾದರೆ ಪುಸ್ತಕಗಳನ್ನು ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಹ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಬಂದು ಅಧ್ಯಯನ ಮಾಡಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಗ್ರಂಥಾಲಯದ ಗಣಕೀಕರಣ, ಇ-ಗ್ರಂಥಾಲಯ ಗಣಕೀಕರಣ, ಇ-ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು. ಜನಪ್ರತಿನಿಧಿಗಳು ಗ್ರಂಥಾಲಯದ ಸದಸ್ಯತ್ವ ಪಡೆದಿದ್ದು ವಿಶೇಷವಾಗಿತ್ತು. ಇದೇ ವೇಳೆ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಕಾರ್ಯ ಗ್ರಂಥಾಲಯಾಧಿಕಾರಿ ಜಿ.ಉಮೇಶ್, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಪ್ರಮುಖರಾದ ರವೀಶ್ ಕ್ಯಾತನಬೀಡು ಮತ್ತಿತರರಿದ್ದರು.