ಮಂಡ್ಯ: ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ವೇತನ ಮತ್ತು ಇತರ ಭತ್ಯೆಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಅಂತೆಯೇ ಹೊಸ ಗ್ರಂಥಾಲಯ ಸ್ಥಾಪಿಸಿ ಅವುಗಳಿಗೆ ಅಗತ್ಯ ಪೀಠೋಪಕರಣ ಒದಗಿಸಲಾಗಿದೆ. ಅಗತ್ಯವಿರುವ ಪುಸ್ತಕ ನೀಡಲಾಗಿದ್ದು, ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಂಥಾಲಯಗಳು ಜ್ಞಾನ ಸಾಗರವಾದರೆ, ಗ್ರಂಥಪಾಲಕರು ಜ್ಞಾನ ಸಾಗರದ ನಾವಿಕರಂತೆ ಕಾರ್ಯನಿರ್ವಹಿಸಬೇಕು. ಗ್ರಂಥಾಲಯಗಳನ್ನು ಸ್ಥಾಪನೆ ಮಾಡುವುದಷ್ಟೇ ಮುಖ್ಯವಲ್ಲ, ಅವುಗಳನ್ನು ನಿರ್ವಹಣೆ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಜನ್ಮದಿನದ ಅಂಗವಾಗಿ ಆ.12 ರಂದು ಗ್ರಂಥಪಾಲಕರ ದಿನವನ್ನು ಆಚರಿಸಲು ಉದ್ದೇಶಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಜಿಲ್ಲೆಯ ಕೆಲವು ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ಇದ್ದ ಕಾರಣ ಈಗ ಆಚರಣೆ ಮಾಡಲಾಗುತ್ತಿದೆ. ಎಲ್ಲ ಗ್ರಂಥಪಾಲಕರು ಈ ಹಿಂದೆ ನಡೆದ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಅದರಂತೆ ಪ್ರತೀ ಮಾಹೆ ವಿನೂತನ ಚಟುವಟಿಕೆಗಳನ್ನು ಆಯೋಜಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಸೆಪ್ಟಂಬರ್‌ನಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಗ್ರಂಥಪಾಲಕರು ಗ್ರಾಮ ಪಂಚಾಯಿತಿಗೆ ಸಹಕರಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಿರುದ್ಯೋಗಿ ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಲು ಹಾಗೂ ವಿದ್ಯಾರ್ಥಿಗಳು ತಮ್ಮ ವಿದ್ಯಾಬ್ಯಾಸಕ್ಕೆ ಅನುಕೂಲ ಆಗುವಂತೆ ಗ್ರಂಥಾಲಯಗಳು ಕಾರ್ಯನಿರ್ವಹಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಸಹಾಯಕ ಕಾರ್ಯದರ್ಶಿಗಳಾದ ಚಂದ್ರು, ರವೀಂದ್ರ, ತಾಪಂ ಇಒಗಳಾದ ಸುಷ್ಮಾ, ವೀಣಾ, ಶ್ರೀನಿವಾಸ್, ಲೋಕೇಶ್‌ಮೂರ್ತಿ, ವೇಣು ಇತರರಿದ್ದರು. ಇದೇ ವೇಳೆ ಬೇಸಿಗೆ ಶೀಬಿರ ಆಯೋಜನೆ ಮತ್ತು ಗ್ರಂಥಾಲಯಗಳಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳ ಆಯೋಜನೆ ಆಧಾರದಲ್ಲಿ ಪ್ರತಿ ತಾಲೂಕಿನ ಮೂವರು ಗ್ರಂಥಪಾಲಕರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.