ಜಿಲ್ಲೆ

ಮಡಿಕೇರಿಯಲ್ಲಿ ಗ್ರಂಥಪಾಲಕರ ದಿನಾಚರಣೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಭಾರತದ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮ ದಿನವನ್ನು ಗ್ರಂಥಪಾಲಕರ ದಿನವನ್ನಾಗಿ ಇತ್ತೀಚೆಗೆ ಆಚರಿಸಲಾಯಿತು. ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ, ಮಡಿಕೇರಿ ಕಚೇರಿ ಹಾಗೂ ಇದರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ , ಕುಶಾಲನಗರ ಶಾಖಾ ಗ್ರಂಥಾಲಯಗಳು, ಮೇಲ್ದರ್ಜೆಗೇರಿದ ಮುಳ್ಳುಸೋಗೆ ಗ್ರಂಥಾಲಯ, ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯ, ಅಲೆಮಾರಿ ಸಮುದಾಯ ಗ್ರಂಥಾಲಯ, ಜಿಲ್ಲಾ ಕಾರಾಗೃಹ ವಾಚನಾಲಯದಲ್ಲಿ ಗ್ರಂಥಪಾಲಕರ ದಿನವನ್ನು ಪುಸ್ತಕ ಪ್ರದರ್ಶನ ಏರ್ಪಡಿಸುವ ಮೂಲಕ ಆಚರಿಸಲಾಯಿತು.

ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮಡಿಕೇರಿ ಕಚೇರಿಯಲ್ಲಿ ಪುಸ್ತಕ ಪ್ರದರ್ಶನವನ್ನು ವಿಶ್ರಾಂತ ಆಕಾಶವಾಣಿ ಉದ್ಘೋಷಕರು ಹಾಗೂ ಸಾಹಿತಿ ಸುಬ್ರಾಯ ಸಂಪಾಜೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆಯ ಈ ಸುಸಂದರ್ಭದಲ್ಲಿ ಗ್ರಂಥಪಾಲಕರ ದಿನ ಆಚರಿಸುವುದು ಅರ್ಥಪೂರ್ಣವಾಗಿದೆ. ಗ್ರಂಥಾಲಯವು ಅಕ್ಷರದ ಮೂಲಕ ತಿಳುವಳಿಕೆಯನ್ನು ಜ್ಞಾನ ಸಂಪತ್ತನ್ನು ಲೋಕದ ಮನಸ್ಸು ಮನಸ್ಸುಗಳಿಗೆ ಪಸರಿಸುವಂತಹ ಕೆಲಸ ಮಾಡುತ್ತಿದೆ. ಅಕ್ಷರ ಎನ್ನುವುದೇ ಒಂದು ಅರ್ಥಪೂರ್ಣ ಶಬ್ದ. ಅಕ್ಷರ ಜ್ಞಾನ, ಇಂತಹ ಜ್ಞಾನ ಸಂಪತ್ತನ್ನು ಒದಗಿಸುವುದೇ ಗ್ರಂಥಾಲಯಗಳು. ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವಾದ ವಸ್ತು ಬೇರೊಂದಿಲ್ಲ. ಯುವ ಪೀಳಿಗೆ ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಆಶುಭಾಷಣ, ಚಿತ್ರಕಲೆ, ಭಾವಗೀತೆ ಮತ್ತು ಜಾನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಿಬ್ಬಂದಿ ವರ್ಗ ಹಾಜರಿದ್ದರು.