ಜಿಲ್ಲೆ

ಗ್ರಾ.ಪಂ.ಅಭಿವೃದ್ಧಿಗೆ ಪೂರಕವಾದ ಎಲ್‌ಎಚ್‌ಐ

ಪ್ರಸಿನ್ ಕೆ.ಆರ್

ಹುಣಸೂರು: ಸುಸ್ಥಿರ ಮತ್ತು ಪರಿಣಾಮಕಾರಿಯಾದ ಶುಚಿತ್ವ ಮತ್ತು ಘನತ್ಯಾಜ್ಯ ವಿಲೇವಾರಿ ಕ್ರಮಗಳನ್ನು ಅನುಸರಿಸುವ ಮೂಲಕ ಮಾದರಿ ಗ್ರಾಮ ಪಂಚಾಯಿತಿಯನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲೈಟ್ ಹೌಸ್ ಇನ್ಷಿಯೇಟಿವ್(ಎಲ್‌ಎಚ್‌ಐ)ಫೇಸ್ 2 ಜಾರಿಗೆ ತಂದಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಕೃಷ್ಣರಾಜು ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿ.ಪಂ.ಸರ್ಕಾರೇತರ ಸಂಘಸಂಸ್ಥೆಗಳಾದ ಐಟಿಸಿ, ಔಟ್‌ರಿಚ್ ಮತ್ತು ಮೈಕ್ಯಾಪ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛ ಶಕ್ತಿ ಸಮ್ಮಾನ್ ಮತ್ತು ಲೈಟ್ ಹೌಸ್ ಇನಿಸಿಯೇಟಿವ್ ಫೇಸ್ 2 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

2014ರಲ್ಲಿ ದೇಶಾದ್ಯಂತ ಆರಂಭಗೊಂಡ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಬಯಲು ಮುಕ್ತ ಶೌಚ ಗುರಿಯೂ ಸಂಪೂರ್ಣವಾಗಿ ಯಶಸ್ಸು ಸಾಧಿಸಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಗ್ರಾಮೀಣರು ಅನುಸರಿಸುತ್ತಿದ್ದ ಶತಮಾನಗಳ ಪದ್ಧತಿಯನ್ನು ಇಂದಿಗೂ ನಿಂತಿಲ್ಲ. ಅದರಲ್ಲೂ ಸ್ವಚ್ಛತೆಯ ವಿಚಾರದಲ್ಲಿ ಅವರದ್ದೇ ಭಾವನೆಗಳಿಗೆ ಅವರು ಜೋತುಬಿದ್ದಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಸುಸ್ಥಿರ ನೈರ್ಮಲ್ಯದೊಂದಿಗೆ ನೈರ್ಮಲ್ಯಕ್ಕೆ ಪೂರಕವಾದ ಘನ, ದ್ರವ ಮತ್ತು ಮಲನೀರು ತ್ಯಾಜ್ಯಗಳ ಸಮರ್ಪಕ ನಿರ್ವಹಣೆಯ ಮೂಲಕ ಮಾದರಿ ಗ್ರಾಮಪಂಚಾಯಿತಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಎಲ್‌ಎಚ್‌ಐ ಫೇಸ್ 1ರಲ್ಲಿ ದೇಶದ 15 ರಾಜ್ಯಗಳ 75 ಗ್ರಾ.ಪಂ.ಗಳಲ್ಲಿ ಪೈಲೆಟ್ ಯೋಜನೆಯಾಗಿ ಜಾರಿಗೊಳಿಸಲಾಗಿತ್ತು. ಫೇಸ್ 1ರ ಯಶಸ್ಸಿನ ನಂತರ ಫೇಸ್ 2ರಲ್ಲಿ ಇದೀಗ ಮತ್ತೆ 15 ರಾಜ್ಯಗಳ 75 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯೋಜನೆ ಜಾರಿಗೆ ಸರ್ಕಾರೇತರ ಸಂಘಸಂಸ್ಥೆಗಳ ಸಹಯೋಗ ಪಡೆದಿದ್ದು, ಈ ಭಾಗದಲ್ಲಿ ಐಟಿಸಿಕಂಪನಿ ಉತ್ತಮ ಸಹಕಾರ ನೀಡುತ್ತಿದೆ. ನೈರ್ಮಲ್ಯ ರೂಪಿಸುವಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವ ಮೂಲಕ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಯೋಜನೆಯ ಉದ್ದೇಶವಾಗಿದೆ ಎಂದರು.

ಐಟಿಸಿ ಕಂಪನಿಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್‌ಬಾಬು ಮಾತನಾಡಿ, ಎಲ್‌ಎಚ್‌ಐ ಯೋಜನೆಯಡಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಸರ್ಕಾರದೊಂದಿಗೆ ಸಹಯೋಗ ನೀಡಿದ್ದು, ಈ ಭಾಗದಲ್ಲಿ ಐಟಿಸಿ ಕಂಪನಿ ಸುಸ್ಥಿರ ನೈರ್ಮಲ್ಯಸ್ಥಾಪನೆಗೆ ಸರ್ಕಾರದೊಂದಿಗೆ ಸಹಭಾಗಿತ್ವ ನೀಡಿದೆ. ಗ್ರಾಮೀಣ ಭಾಗಗಳಲ್ಲಿ ಮಹಿಳಾ ಸಂಘಗಳು ಯೋಜನೆ ಜಾರಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದೀಗ ಘನ, ದ್ರವ ಮತ್ತು ಮಲದ್ರವ(ಬ್ಲ್ಯಾಕ್ ವಾಟರ್ ಮ್ಯಾನೇಜ್‌ಮೆಂಟ್)ಗಳ ನಿರ್ವಹಣೆಯನ್ನು ಸಮರ್ಥವಾಗಿ ಮಾಡುತ್ತಿರುವ ಮಹಿಳಾ ಸಂಘಗಳಿಗೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಜಿಲ್ಲಾಮಟ್ಟದಲ್ಲಿ ಸ್ವಚ್ಛ ಶಕ್ತಿ ಸಮ್ಮಾನ್ ಪ್ರಶಸ್ತಿ ನೀಡಲಾಗುವುದು. ಕಾರ್ಯಕ್ರಮವು ಪೈಲೆಟ್ ಯೋಜನೆಯಾಗಿ ಹುಣಸೂರು ಮತ್ತು ನಂಜನಗೂಡು ತಾಲೂಕುಗಳಲ್ಲಿ ಜಾರಿಗೊಂಡಿದೆ ಎಂದರು.

ಅಧ್ಯಕ್ಷತೆಯನ್ನು ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ವಹಿಸಿದ್ದರು. ಮೈಕ್ಯಾಪ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫುಲ್ ಹಸನ್, ಔಟ್ ರೀಚ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಎಸ್ ಗಾಂವ್ಕರ್, ಪಿರಿಯಾಪಟ್ಟಣ ತಾ.ಪಂ.ಇಒ ಡಿ.ಬಿ.ಸುನಿಲ್ ಕುಮಾರ್, ಐಟಿಸಿ ಅಧಿಕಾರಿಗಳಾದ ಎಂ.ಮನೋಜ್, ಚನ್ನವೀರೇಶ್, ಪ್ರವೀಣ್ ಬಾಬು ಸೇರಿದಂತೆ ಎಸ್‌ಬಿಎಂ ಯೋಜನಾ ಜಿಲ್ಲಾ ಸಮಾಲೋಚಕರು, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ವ್ಯವಸ್ಥಾಪಕರು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನ ಗ್ರಾ.ಪಂ.ಗಳ ಪಿಡಿಒಗಳು, ಎನ್‌ಆರ್‌ಎಲ್‌ಎಂ ಸದಸ್ಯರು, ವ್ಯವಸ್ಥಾಪಕರು ಇದ್ದರು.