ಮೈಸೂರು: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಆಯೋಜಿಸಿದ್ದ ಸೊಪ್ಪು ಮೇಳಕ್ಕೆ ಜನರು ವಿವಿಧ ಬಗೆಯ ಸೊಪ್ಪುಗಳನ್ನು ಖರೀದಿಸುವುದರೊಂದಿಗೆ ಸಂಭ್ರಮದ ತೆರೆ ಬಿತ್ತು.
ಮೇಳದ 2ನೇ ದಿನವಾದ ಭಾನುವಾರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. 25 ಲಕ್ಷ ರೂ. ವಹಿವಾಟು ನಡೆಯಿತು. ಗ್ರಾಹಕರ ದಂಡೆ ಬರುತ್ತಿರುವುದನ್ನು ಕಂಡು ಮಳಿಗೆದಾರರು ಖುಷಿಯಿಂದ ಬೀಗಿದರು.
ಎಚ್.ಡಿ.ಕೋಟೆ, ಕನಕಪುರ, ಕುಂದಗೋಳ, ನಂಜನಗೂಡಿನಿಂದ ಬಂದಿದ್ದ ಸೊಪ್ಪು ಬೆಳೆಗಾರರು ತಾವು ತಂದಿದ್ದ ತರಹೇವಾರಿ ಸೊಪ್ಪು ಪೂರ್ತಿ ಮಾರಾಟವಾಗಿದ್ದನ್ನು ಕಂಡು ಖುಷಿಯಾದರು.
ಬೆರಕೆ ಸೊಪ್ಪಿನ ಪಲ್ಯ, ಮುದ್ದೆ-ಬೆರಕೆ ಸೊಪ್ಪಿನ ಸಾರು ಜನ ಇಷ್ಟ ಪಟ್ಟು ಉಂಡರು. ‘ಬೆಳಗ್ಗೆಯಿಂದಲೂ ಮುದ್ದೆ ಮಾಡುತ್ತಲೇ ಇದ್ದೇವೆ’ ಎಂದು ಎಚ್.ಡಿ.ಕೋಟೆಯ ನೂರಲಕುಪ್ಪೆ ಚಿನ್ನಮ್ಮ ಖುಷಿಯಿಂದ ಹೇಳಿದರು.
‘ನಮ್ಮ ಊರಿನಲ್ಲಿ ಕಳೆ ಎಂದು ಬಿಸಾಕುತ್ತಿದ್ದ ಕಳೆ ಸೊಪ್ಪುಗಳನ್ನು ಇಲ್ಲಿ ಉತ್ತಮ ಬೆಲೆಗೆ ಮಾರುತ್ತಿರುವುದು ನಮಗೆ ಧೈರ್ಯ ತಂದಿದೆ’ ಎಂದು ಹುಲಿಕಾಡು ರೈತ ಕಂಪನಿಯ ಮಹೇಶ್ ಕುಮಾರ್ ಹೇಳಿದರು.
ಸೀಗೆ ಸೊಪ್ಪು, ಬೆರಕೆ ಸೊಪ್ಪು, ಬಿದರು ಕಳಲೆ, ಹೊನಗೊನೆ ಸೊಪ್ಪು, ಅಣ್ಣೇಸೊಪ್ಪು ತಂದಿದ್ದೆಲ್ಲ ಖಾಲಿಯಾಯಿತು ಎಂದು ಕನಕಪುರದ ಕಾಡುಹಳ್ಳಿ ಕೊಳಗೊಂಡನಹಳ್ಳಿಯಿಂದ ಬಂದಿದ್ದ ಕೆ.ಎನ್.ನಾಗರಾಜು ತಿಳಿಸಿದರು.
ಚಿತ್ರಕಲಾ ಸ್ಪರ್ಧೆದಲ್ಲಿ 30 ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಾವು ಕಂಡ ಸೊಪ್ಪಿನ ಕೃಷಿ, ಮಾರುಕಟ್ಟೆ ಮತ್ತು ಅಡುಗೆ ಲೋಕವನ್ನು ಬಣ್ಣಗಳ ಮೂಲಕ ತೆರೆದಿಟ್ಟರು. ವಿಜೇತರಿಗೆ ಬಹುಮಾನ ವಿತರಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿದ್ದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿ ಎಂ.ಶಿವಕುಮಾರ್ ಮಾತನಾಡಿದರು.
ಸೊಪ್ಪಿನ ಚಿತ್ರಕಲಾ ಸ್ಪರ್ಧೆಯ 5ರಿಂದ 9 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಿ.ಪುನರ್ ದತ್ತ (ಪ್ರಥಮ), ಎಂ.ಪ್ರಣತಿ(ದ್ವಿತೀಯ) ಜಿ.ಎಸ್.ಸೊಹನಿ (ತೃತೀಯ), ಎಸ್.ಕೆ.ರಿಷಿಕಾ ನಂದಿ, ಎಂ.ವಿಶ್ವಾಸ್ ಪ್ರೋತ್ಸಾಹಕರ ಬಹುಮಾನ ಪಡೆದರು.
9ರಿಂದ 12 ವರ್ಷದ ಮಕ್ಕಳ ವಿಭಾಗದಲ್ಲಿ ತನ್ವಿ ರೆಡ್ಡಿ (ಪ್ರಥಮ), ಸಿರಿ ಹುಡುಪದ್ (ದ್ವಿತೀಯ), ರಶ್ಮಿ( ತೃತೀಯ), ಚಾರುಮಿತ್ರ ಮತ್ತು ವಿ.ಮನೋಜ್ ಪ್ರೋತ್ಸಾಹಕರ ಬಹುಮಾನ ಪಡೆದರು.
ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಆಶ್ರಯದಲ್ಲಿ ಆಯೋಜಿಸಿದ್ದ ಅಡುಗೆ ಸ್ಪರ್ಧೆಗೆ 31 ಜನ ವಿವಿಧ ಬಗೆಯ ಸೊಪ್ಪಿನ ಅಡುಗೆಗಳನ್ನು ತಂದಿದ್ದರು. ಸೊಪ್ಪಿನ ರೊಟ್ಟಿ, ಸೊಪ್ಪಿನ ಕೇಕ್, ಸೊಪ್ಪಿನ ಪಲಾವ್, ತಂಬುಳಿ, ದೊಡ್ಡಪತ್ರೆ ಬಜ್ಜಿ, ಮೆಂತೆ ಬಾತ್, ನುಗ್ಗೆ ಸೊಪ್ಪಿನ ಪಲ್ಯ, ಚಕ್ರಮುನಿ ಸೊಪ್ಪಿನ ಚಟ್ನಿ, ನೆಲಬಸಲೆ ಸೊಪ್ಪಿನ ಮೊಸಪ್ಪು, ತುಂಬೇ ಸೊಪ್ಪಿನ ಬಿಸ್ಕತ್, ಹುಣಸೆ ಸೊಪ್ಪಿನ ಸೂಪ್ ಸ್ಟಿಕ್, ಬಲೂನ್ ವೈನ್ ಸೊಪ್ಪಿನ ದೋಸೆ… ಹೀಗೆ ವಿವಿಧ ಸೊಪ್ಪಿನ ಖಾದ್ಯಗಳನ್ನು ಸ್ಪರ್ಧೆಗೆ ತರಲಾಗಿತ್ತು.
ಡಾ.ಗುರುರಾಜ್ (ಪ್ರಥಮ), ವಿ.ಸುಮನ್(ದ್ವಿತೀಯ), ಸಿ.ಮಹೇಶ್ವರಿ ಪ್ರಸಾದ್ (ತೃತೀಯ) ಬಹುಮಾನ ಪಡೆದರು. ಅತ್ಯಂತ ಕಿರಿಯ ಸ್ಪರ್ಧಿ ಸೊಲೊಮೆ ಮಾರ್ಗರೇಟ್, ಹಿರಿಯ ಡಾ.ಮನೋನ್ಮಣಿ ಅವರ ಅಡುಗೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು.
ತೀರ್ಪುಗಾರರಾಗಿ ನಿವೃತ್ತ ವಿಜ್ಞಾನಿ ಡಾ. ಜಮುನಾ ಅರಸ್, ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಡಾ.ಸತೀಶ್ ಪೈ ಮತ್ತು ನೂರ್ ಫಾತಿಮಾ, ಜೆಎಸ್‌ಎಸ್‌ಅಕಾಡೆಮಿ ಪ್ರಾಧ್ಯಾಪಕ ಡಾ.ಬಿ.ಎಂ.ವೀಣಾ, ಸಹಜ ಕೃಷಿಕ ಶ್ರೀವತ್ಸ ಇದ್ದರು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಬಿ ಎನ್.ಜ್ಞಾನೇಶ್ ಬಹುಮಾನ ವಿತರಿಸಿದರು. ಸಹಜ ಸಮೃದ್ಧ ಸಂಸ್ಥೆಯ ಕೃಷ್ಣಪ್ರಸಾದ್, ಸೀಮಾ ಪ್ರಸಾದ್, ಶಾಂತಕುಮಾರ್ ಮತ್ತು ಮಂಜು ಕೆ ಎಸ್ ಇದ್ದರು.