ಜಿಲ್ಲೆ

ಪ್ರಾಚ್ಯವಸ್ತು ಸಂಗ್ರಹಾಲಯ ಆರಂಭಕ್ಕೆ ಪಟ್ಟು

ಶಿವರಾಜ.ಎಂ

ಉಸ್ತುವಾರಿ ಸಚಿವರಿಗೆ ಮನವಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಇತಿಹಾಸ ಸಾರುವ ಪ್ರಾಚ್ಯವಸ್ತುಗಳ ಸಂರಕ್ಷಣೆಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮುಂದುವರಿದಿದ್ದು, ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಂಗಳಕ್ಕೆ ಈಗ ಮನವಿ ತಲುಪಿದೆ.
ದೇವನಹಳ್ಳಿ ಜನರ ಬಹುದಿನಗಳ ಬೇಡಿಕೆಯಾಗಿರುವ ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ಮಾಣದ ಕನಸಿಗೆ ರಕ್ಕೆಪುಕ್ಕ ಬರುತ್ತಿದ್ದು, ಇದರ ನಡುವೆ ವಿವಿಧ ಸಂಘಟನೆಗಳು ಹಾಗೂ ನಾಗರಿಕರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಸೆಳೆದು ಶತಾಯಗತಾಯ ಪ್ರಾಚ್ಯವಸ್ತು ಸಂಗ್ರಹಾಲಯದ ಆರಂಭವಾಗಲೇಬೇಕೆಂಬ ಕಸರತ್ತು ಶುರುವಾಗಿದೆ.

ಹಳೇ ತಹಸೀಲ್ದಾರ್ ಕಟ್ಟಡ ಗುರಿ: ದೇವನಹಳ್ಳಿಯಲ್ಲಿರುವ ಹಳೇ ತಹಸೀಲ್ದಾರ್ ಕಚೇರಿ ಕಟ್ಟಡವನ್ನು ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರಿಸುವ ಸಂಬಂಧ ಈಗಾಗಲೇ ಜಿಲ್ಲಾಡಳಿತ ತಹಸೀಲ್ದಾರ್‌ಗೆ ಪತ್ರ ಬರೆದಿರುವುದು ದೇವನಹಳ್ಳಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಶ್ರಮಿಸುತ್ತಿರುವ ಇತಿಹಾಸ ಸಂಶೋಧಕರ ಪ್ರಯತ್ನಕ್ಕೆ ಲಸಿಗುವ ಕ್ಷಣ ಸನಿಹವಾದಂತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿರುವ ಸಮಾನ ಮನಸ್ಕರ ತಂಡ ಪ್ರಾಚ್ಯವಸ್ತು ಸಂಗ್ರಹಾಲಯ ಕುರಿತಾಗಿ ಮನವಿ ನೀಡಿದೆ.

ಪತ್ರ ವ್ಯವಹಾರ ನಡೆದಿದೆ: ಪ್ರಸಕ್ತ ಸಾಲಿನಲ್ಲಿ ಈ ಸಂಬಂಧ ಜಿಲ್ಲಾಡಳಿತದಿಂದ ತಾಲೂಕು ಕಚೇರಿಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದು, ಹಳೇ ತಾಲೂಕು ಕಚೇರಿ ಹಸ್ತಾಂತರಿಸುವ ಕುರಿತು ವರದಿ ಕೇಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.


ಶಿಥಿಲಗೊಂಡಿರುವ ಕಟ್ಟಡ: ಶತಮಾನದ ಇತಿಹಾಸವಿರುವ ದೇವನಹಳ್ಳಿಯ ಹಳೇ ತಾಲೂಕು ಕಚೇರಿ ಹೊಸದಾಗಿ ನಿರ್ಮಾಣವಾದ ಮಿನಿವಿಧಾನಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಇದನ್ನು ಸಂರಕ್ಷಣೆ ಮಾಡಿ ನಂತರ ಕಟ್ಟಡವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಲಾಗುತ್ತದೆ. ಕಲೆ, ಸಂಸ್ಕೃತಿ, ಜಾನಪದ, ರಂಗಕಲೆ, ಶಾಸನ, ಮಾಸ್ತಿಗಲ್ಲು-ವೀರಗಲ್ಲು ಸ್ವಾತಂತ್ರ್ಯ ಹೋರಾಟಗಾರರ ಜೀವನ ಹಾಗೂ ತಾಲೂಕಿನ ಇತಿಹಾಸ ಸಾರುವ ಕೇಂದ್ರವನ್ನಾಗಿ ಮಾಡಲು ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಕಟ್ಟಡವನ್ನು ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರಿಸಿಕೊಡಬೇಕೆಂಬುದು ಇತಿಹಾಸ ಸಂಶೋಧಕರ ಬೇಡಿಕೆಯಾಗಿದೆ.


ಶಿಥಿಲಾವಸ್ಥೆ ತಲುಪಿರುವ ದೇವನಹಳ್ಳಿಯ ಹಳೇ ತಾಲೂಕು ಕಚೇರಿ ಕಟ್ಟಡವನ್ನು ನವೀಕರಣ ಮಾಡಿ ಪ್ರಾಚ್ಯವಸ್ತು ಸಂಗ್ರಹಾಲಯ ಆರಂಭಕ್ಕೆ ಅನುವು ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಪತ್ರ ನೀಡಿ ಗಮನ ಸೆಳೆಯಲಾಗಿದೆ.
ಬಿಟ್ಟಸಂದ್ರ ಗುರುಸಿದ್ದಯ್ಯ, ಇತಿಹಾಸ ಸಂಶೋಧಕರು ದೇವನಹಳ್ಳಿ